

ಕಲಬುರಗಿ: ರಾಷ್ಟಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತಿç ಜಯಂತಿ ನಿಮಿತ್ತ ಮನೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗೆ ಸೋಮವಾರ ಆರೋಗ್ಯ ತಪಾಸಣೆ ಉಚಿತ ಶಿಬಿರ ಆಯೋಜಿಸಲಾಗಿತ್ತು.
ಕಾರಾಗೃಹ ಮುಖ್ಯಸ್ಥ ಡಾ.ಪಿ.ರಂಗನಾಥ ಅವರು ಗಾಂಧೀಜಿ ಮತ್ತು ಶಾಸ್ತಿಜಿ ಭಾವಚಿತ್ರಗಳಿಗೆ ಪುಷ್ಪಾರ್ಚಣೆ ಮಾಡಿ ಮಾತನಾಡಿ, ಗಾಂಧೀಜಿ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣ ಜತೆಗೆ ಉತ್ತಮ ಆರೋಗ್ಯ ಹೊಂದಬೇಕು ಎಂದರು.
ಆಸ್ಪತ್ರೆ ತೀವ್ರ ನಿಗಾ ಘಟಕದ ಡಾ.ಮುಜಮ್ಮಿಲ್ ಮಾತನಾಡಿ, ನಮ್ಮ ಆಸ್ಪತ್ರೆ ವೈದ್ಯರ ತಂಡ ಜೈಲಲ್ಲಿರುವ ಬಂದಿಗಳ ಹೃದ್ರೋಗ, ಬಿಪಿ, ಶುಗರ್ ಇತರ ಕಾಯಿಲೆಗಳ ತಪಾಸಣೆ ನಡೆಸಿದೆ ಎಂದು ತಿಳಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಚ್.ಎಂ. ಹಂಚನಾಳ ಮಾತನಾಡಿದರು. ಕಾರಾಗೃಹ ಅಧೀಕ್ಷಕ ಬಿ.ಎಂ. ಕೊಟ್ರೇಶ್, ವೈದ್ಯಾಧಿಕಾರಿ ಡಾ.ಆನಂದ ಅಡಗಿ, ಡಾ.ರವೀಂದ್ರ ಬನ್ನೇರ್, ಸಹಾಯಕ ಅಧೀಕ್ಷಕ ಡಾ.ಅಣ್ಣಾರಾವ ಪಾಟೀಲ್, ಹುಸೇನಿ ಪೀರ್, ಮನೂರ್ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಜಗದೀಶ ಪಾಟೀಲ್, ಡಾ.ಶ್ರೀಕಾಂತ, ಡಾ.ನಿತಾಶಾ, ಕಮಲಾಪುರ ಡಯಟ್ ಉಪನ್ಯಾಸಕ ಇಸೂಫ್ ಪಟೇಲ್ ಹಾಗೂ ಜಿಲ್ಲಾ ಸಂಯೋಜಕ ಶಿವಾನಂದ ಚವ್ಹಾಣ್ ಇದ್ದರು.
ಸಂಸ್ಥೆ ಶಿಕ್ಷಕ ನಾಗಾರಾಜ ಮುಲಗೆ ನಿರೂಪಣೆ ಮಾಡಿ ವಂದಿಸಿದರು. ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಲೋಕ ಶಿಕ್ಷಣ ಇಲಾಖೆಯಿಂದ ನವ ಸಾಕ್ಷರರಾದ ಬಂದಿಗಳಿಗೆ ಅಭಿನಂದನಾ ಪ್ರಮಾಣಪತ್ರ ವಿತರಿಸಲಾಯಿತು. ೧೮೫ ಪುರುಷ ಹಾಗೂ ೨೬ ಮಹಿಳೆಯರು ಸೇರಿ ೨೧೧ ಬಂದಿಗಳು ಶಿಬಿರದ ಲಾಭ ಪಡೆದುಕೊಂಡರು.