ತಿ.ನರಸೀಪುರ: ತಾಲೂಕಿನ ಶಂಭುದೇವನಪುರ ಗ್ರಾಮದಲ್ಲಿ ಏ.20ರಂದು ಶ್ರೀಶಂಭುಲಿಂಗೇಶ್ವರಸ್ವಾಮಿ ದೇವಸ್ಥಾನದ ನೂತನ ಶಿಖರ ಕಲಶಾರೋಹಣ ಹಾಗೂ ದೇವಾಲಯ ಸಂಪ್ರೋಕ್ಷಣ ಹಾಗೂ ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಏ.19 ಹಾಗೂ 20ರಂದು ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಸಂಜೆ ಅಗ್ರೋದಕ ಗೋದೇವತೆ, ವೀರಗಾಸೆ, ಮಂಗಳವಾದ್ಯೊಡನೆ ದೇವಾಲಯ ಪ್ರವೇಶ ನಂತರ ಸ್ವಸ್ತಿ ಪುಣ್ಯಾಹ ವಾಚನ, ನಾಂದಿ, ವಾಸ್ತುಪೂಜೆ ಮತ್ತು ವಾಸ್ತುಹೋಮ, ಗಣಹೋಮ ನಂತರ ನವಗ್ರಹ ಶಾಂತಿ ಪ್ರಧಾನ ಕಳಸ ಸ್ಥಾಪನೆ ನಂತರ ಶಿಖರ ಕಲಶಕ್ಕೆ ಆದಿವಾಸಗಳು ಜರುಗಲಿವೆ. ಭಾನುವಾರ ಬೆಳಗ್ಗೆ 5.10ರಿಂದ 6.5ರ ಬ್ರಾಹ್ಮಿ ಮುಹೂರ್ತದಲ್ಲಿ ಶಿಖರ ಕಲಶಾರೋಹಣ ನಂತರ ಶಂಭುಲಿಂಗೇಶ್ವರ ಸ್ವಾಮಿಗೆ ಏಕವಾರ ರುದ್ರಾಭಿಷೇಕ, ಪ್ರಧಾನ ಹೋಮ, ಜಯಾದಿ ಹೋಮ, ಪ್ರಾಯಶ್ಚಿತ್ತ ಹೋಮ ಬೆಳಗ್ಗೆ 9.30 ಗಂಟೆಗೆ ಪೂರ್ಣಾಹುತಿ ಕುಂಭಾಭಿಷೇಕವನ್ನು ವೃಷಭ ಲಗ್ನದಲ್ಲಿ ಹಮ್ಮಿಕೊಳ್ಳಲಾಗಿದೆ. ನಂತರ 10.30 ಗಂಟೆಗೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನೆರವೇರುತ್ತದೆ.
ಹೊಸೂರುಹುಂಡಿ ಮಠದ ಶ್ರೀರಾಜಶೇಖರ ಸ್ವಾಮೀಜಿ ನೇತೃತ್ವದಲ್ಲಿ ನಾಗೇಶ್ ಮತ್ತು ದಯಾನಂದ್ ಪೌರೋಹಿತ್ಯದಲ್ಲಿ ಪೂಜಾ ಕಾರ್ಯವನ್ನು ಏರ್ಪಡಿಸಲಾಗಿದೆ.
ನಂತರ 10.30 ಗಂಟೆಗೆ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಸ್ವಾಮೀಜಿ, ದೇವನೂರು ಮಠದ ಶ್ರೀಮಹಾಂತ ಸ್ವಾಮೀಜಿ ಅವರ ಸಮ್ಮುಖದಲ್ಲಿ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದು, ವಾಟಾಳು ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮಲ್ಲನಮೂಲೆ ಮಠದ ಶ್ರೀಚನ್ನಬಸವ ಸ್ವಾಮೀಜಿ, ಸಾಲೂರು ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮರಿಯಾಲ ಮಠದ ಶ್ರೀಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಚಾಮರಾಜನಗರ ಮಠದ ಶ್ರೀಚನ್ನಬಸವ ಸ್ವಾಮೀಜಿ, ಮಾಡ್ರಹಳ್ಳಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಎಂ. ಎಲ್.ಹುಂಡಿ ಮಠದ ಶ್ರೀಗೌರಿಶಂಕರ ಸ್ವಾಮೀಜಿ, ಬಿ.ಜಿ.ಪುರ ಮಠದ ಶ್ರೀಚಂದ್ರಶೇಖರ ಸ್ವಾಮೀಜಿ, ಮುಡುಕುತೊರೆ ಕಲ್ಲುಮಠದ ಶ್ರೀನಂದಿಕೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು.
ಹಲವಾರ ಮಠದ ಶ್ರೀಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಮತ್ತು ಗವಿಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ನುಡಿ ನಮನ ಸಲ್ಲಿಸಲಿದ್ದು, ನೆರಗ್ಯಾತನಹಳ್ಳಿ ಮಠದ ಶ್ರೀಇಮ್ಮಡಿ ಶಿವಕುಮಾರ ಸ್ವಾಮೀಜಿ, ಆಲಹಳ್ಳಿ ಮಠದ ಶ್ರೀಇಮ್ಮಡಿ ಬಸಪ್ಪ ಸ್ವಾಮೀಜಿ, ಕುಂದೂರು ಮಠದ ಶ್ರೀನಂಜುಂಡ ಸ್ವಾಮೀಜಿ, ತೋಪಿನ ಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ, ಹಸ್ತಿಕೇರಿ ಮಠದ ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ, ಕುಂತೂರು ಮಠದ ಶ್ರೀಶಿವಪ್ರಭು ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಉಪಸ್ಥಿತಿ ವಹಿಸುವರು.
ಧಾರ್ಮಿಕ ಸಭೆಯ ಬಳಿಕ ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ 9.30 ಶ್ರೀಶಂಭುಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿಯವರಿಂದ ‘ದಕ್ಷಯಜ್ಞ’ ಪೌರಾಣಿಕ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.