

* ನಗರಾಭಿವೃದ್ಧಿ ಇಲಾಖೆ ಆದೇಶ
* ರಾಮನಗರ ಪ್ರಾಧಿಕಾರದ ಮೂರು ಬಡಾವಣೆಗಳಿಗೆ ಅನ್ವಯ
ಗಂಗಾಧರ್ ಬೈರಾಪಟ್ಟಣ ರಾಮನಗರ
ವಿವಾದದ ಕೇಂದ್ರವಾಗಿರುವ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಒಳಪಟ್ಟಿರುವ ಮೂರು ಬಡಾವಣೆಗಳಲ್ಲಿ ಮೂಲಸೌಕರ್ಯ ಒದಗಿಸಲು ನಿವೇಶನದಾರರಿಂದ ಪ್ರತಿ ಚದರ ಅಡಿಗೆ 200 ರೂ. ಪಡೆಯಲು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಹಿಂದಿನ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 20 ವರ್ಷಗಳ ಹಿಂದೆ ರಾಮನಗರದ ಜೀಗೇನಹಳ್ಳಿ, ಅರ್ಚಕರಹಳ್ಳಿ ಹಾಗೂ ಚನ್ನಪಟ್ಟಣದ ಸುಣ್ಣಘಟ್ಟ ಬಳಿ ಕ್ರಮವಾಗಿ ಅರ್ಕಾವತಿ ಬಡಾವಣೆ, ಹೆಲ್ತ್ ಸಿಟಿ ಬಡಾವಣೆ ಮತ್ತು ಕಣ್ವ ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮೂರು ಬಡಾವಣೆಗಳಿಂದ ಒಟ್ಟು 1837 ನಿವೇಶನ ಸಿದ್ಧಪಡಿಸಿ, ಇವುಗಳಲ್ಲಿ 1246 ನಿವೇಶನಗಳನ್ನು ಹಂಚಿಕೆ ಮೂಲಕ ಹಾಗೂ 430 ನಿವೇಶನಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲಾಗಿದೆ. 2009ರಿಂದ ನಂತರದ ವರ್ಷಗಳಲ್ಲಿ ಮಾರಾಟ ಮಾಡಲಾದ ನಿವೇನಗಳಿಗೆ ಖರೀದಿ ಮಾಡಿದ 10 ವರ್ಷಗಳ ನಂತರ ಶುದ್ಧ ಕ್ರಯ ಪತ್ರವನ್ನು ನೀಡಬೇಕಿತ್ತು.
ಆದರೆ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಕ್ಷೆಯನ್ನು ಹೊಂದದೇ ಇರುವುದು ಸೇರಿ ಹಲವು ನ್ಯೂನತೆಗಳಿರುವ ಕಾರಣ ಶುದ್ಧ ಕ್ರಯ ಪತ್ರ ನೀಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಅಂದಿನಿಂದಲೂ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಿ, ನಂತರ ಕೆಲವು ನಿಮಯಗಳಿಗೆ ಒಳಪಟ್ಟು ಕ್ರಯ ಪತ್ರ ಮಾಡಿಕೊಡುವಂತೆ ನಿರ್ದೇಶನ ನೀಡಿತ್ತು.
ಬಡಾವಣೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ ಹಸ್ತಾಂತರ ಮಾಡಿದರೆ ಖಾತೆ ಮಾಡಿಕೊಡುವುದಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು ಒಪ್ಪಿಗೆ ಸೂಚಿಸಿದ್ದವು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪ್ರಾಧಿಕಾರ ಅಭಿವೃದ್ಧಿ ಶುಲ್ಕವನ್ನು ನಿವೇಶನ ಖರೀದಿದಾರರಿಂದಲೇ ಪಡೆಯಲು ನಿರ್ದೇಶನ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು. ಈಗ ನಗರಾಭಿವೃದ್ಧಿ ಇಲಾಖೆ ಈ ಮೂರು ಲೇಔಟ್‌ಗಳ ಅಭಿವೃದ್ಧಿಗೆ ನಿವೇಶನದಾರರಿಂದಲೇ ಪ್ರತಿ ಚದರ ಅಡಿಗೆ 200 ರೂ. ಪಡೆಯುವಂತೆ ಆದೇಶ ಹೊರಡಿಸಿದೆ.
ರಾಮನಗರ - ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವನ್ನು ಕಳೆದ ಕೆಲವು ವರ್ಷಗಳ ಹಿಂದೆ ಪ್ರತ್ಯೇಕಿಸಲಾಯಿತು. ಆದರೆ, ಈ ಪ್ರಾಧಿಕಾರ ಅಭಿವೃದ್ಧಿ ಪಡಿಸಿದ್ದ ಬಡಾವಣೆಗಳ ಜವಾಬ್ದಾರಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಹೆಗಲಿಗೆ ಬಿತ್ತು. ಈ ನಿವೇಶನ ಖರೀದಿದಾರರಿಗೆ ಕ್ರಯ ಪತ್ರ ಮಾಡಿಕೊಡುವ ಜತೆಗೆ, ಅವರ ಹೆಸರಿಗೆ ಖಾತೆ ಆಗಬೇಕಾದರೆ ಬಡಾವಣೆಗೆ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ಪ್ರಾಧಿಕಾರದ ಮೇಲೆಯೇ ಇತ್ತು. ಆದರೆ ಪ್ರಾಧಿಕಾರದ ಬಳಿ ಹಣ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರಿ ನಿವೇಶನದಾರರಿಂದಲೇ ಅಭಿವೃದ್ಧಿ ಶುಲ್ಕವನ್ನು ಪಡೆಯಲು ಯೋಜಿಸಿತ್ತು. ಈಗ ನಗರಾಭಿವೃದ್ಧಿ ಇಲಾಖೆ ಇದಕ್ಕೂ ಒಪ್ಪಿಗೆ ಸೂಚಿಸಿದೆ.
ರಾಮನಗರದ ಜೀಗೇನಹಳ್ಳಿ ಬಡಾವಣೆ, ಅರ್ಚಕರಹಳ್ಳಿಯ ಹೆಲ್ತ್ ಸಿಟಿ ಬಡಾವಣೆ ಮತ್ತು ಚನ್ನಪಟ್ಟಣದ ಸುಣ್ಣಘಟ್ಟ ಕಣ್ವ ಬಡಾವಣೆಗೆ ವಿದ್ಯುತ್, ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡಬೇಕಿದೆ. ಇದಕ್ಕೆ ಜೀಗೇನಹಳ್ಳಿ ಬಡಾವಣೆಗೆ ಒಟ್ಟು 35.95 ಕೋಟಿ ರೂ., ಹೆಲ್ತ್ ಸಿಟಿ ಬಡಾವಣೆಗೆ 6.85 ಕೋಟಿ ರೂ. ಮತ್ತು ಕಣ್ವ ಬಡಾವಣೆಗೆ 45.95 ಕೋಟಿ ರೂ. ಸೇರಿ ಒಟ್ಟು 88.77 ಕೋಟಿ ರೂ. ಅಂದಾಜು ಪಟ್ಟಿಯನ್ನು ಪ್ರಾಧಿಕಾರ ಸಿದ್ಧಪಡಿಸಿ, ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿತ್ತು.
ಚನ್ನಪಟ್ಟಣದ ಕಣ್ವ ಬಡಾವಣೆಯನ್ನು 49 ಎಕರೆ 2 ಗುಂಟೆ, ರಾಮನಗರದ ಜೀಗೇನಹಳ್ಳಿ ಬಡವಾಣೆಯನ್ನು 43 ಎಕರೆ 29 ಗುಂಟೆ ಮತ್ತು ಹೆಲ್ತ್ ಸಿಟಿ ಬಡಾವಣೆಯನ್ನು 7 ಎಕರೆ 36 ಗುಂಟೆಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮೂರು ಲೇಔಟ್‌ಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತವೆ. ಇವುಗಳಲ್ಲಿ ಕಣ್ವ ಬಡಾವಣೆ ಮತ್ತು ರಾಮನಗರದ ಜೀಗೇನಹಳ್ಳಿ ಲೇಔಟ್‌ನ ನಿವೇಶನಗಳು ಅಧಿಕೃತ ನಕ್ಷೆಯೇ ಇಲ್ಲದೆ ಹಂಚಿಕೆ ಆಗಿದೆ. ಇನ್ನು ರಾಮನಗರ ಹೆಲ್ತ್ ಸಿಟಿಯ ಲೌಟ್‌ನ ಭೂ ಮಾಲೀಕತ್ವ ಮೂಲ ಖಾತೆದಾರರ ಹೆಸರಲ್ಲೇ ಇದ್ದವು.
ಪ್ರತಿ ಚದರ ಅಡಿಗೆ 200 ರೂ. ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಆದೇಶ ನೀಡಿದೆ. ಇದರಂತೆ ಶೀಘ್ರದಲ್ಲಿಯೇ ನಿವೇಶನ ಖರೀದಿದಾರರೊಟ್ಟಿಗೆ ಸಭೆ ನಡೆಸಿ, ಅವರಿಂದ ಅಭಿವೃದ್ಧಿ ಶುಲ್ಕ ಸಂಗ್ರಹ ಮಾಡಿಕೊಂಡು ಬಡಾವಣೆಗಳಿಗೆ ಮೂಲ ಸೌಕರ್ಯ ಒದಗಿಸಲು ಕ್ರಮವಹಿಸಲಾಗುತ್ತದೆ.
ಎ.ಬಿ.ಚೇತನ್‌ಕುಮಾರ್, ಅಧ್ಯಕ್ಷ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ
ನಿವೇಶನದಾರರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ 16 ವರ್ಷದ ಸಮಸ್ಯೆಗೆ ಡಿಸಿಎಂ ಅವರೊಂದಿಗೆ ಚರ್ಚಿಸಿ ಮುಕ್ತಿ ನೀಡಲು ಶ್ರಮಿಸಲಾಗಿದೆ. ಅಭಿವೃದ್ಧಿ ಶುಲ್ಕ ಪಡೆದೇ ಅಗತ್ಯ ಸೌಲಭ್ಯ ನೀಡಬೇಕಿತ್ತು, ಸರ್ಕಾರದಿಂದಲೂ ಒಂದಿಷ್ಟು ಅನುಧಾನ ಪಡೆದುಕೊಂಡು ಕೆಲಸಕ್ಕೆ ಚಾಲನೆ ನೀಡಲಾಗುವುದು.
ಎಚ್.ಎ.ಇಕ್ಬಾಲ್ ಹುಸೇನ್, ಶಾಸಕ, ರಾಮನಗರ