

ಚಿಕ್ಕಬಳ್ಳಾಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರತ್ಯೇಕ ಎರಡು ಪ್ರಕರಣದ ಇಬ್ಬರು ಅಪರಾಧಿಗಳಿಗೆ ನ್ಯಾಯಾಲಯವು ತಲಾ 20 ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.
ಚಿಂತಾಮಣಿ ತಾಲೂಕಿನ ಐಮಿರೆಡ್ಡಿಹಳ್ಳಿಯ ಕಲ್ಯಾಣ್ ಮತ್ತು ಚಿಕ್ಕಮುನಿಮಂಗಲ ಕೆ.ಸುರೇಶ್ ಶಿಕ್ಷೆಗೊಳಗಾದವರು. ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಎನ್.ಸವಿತಾ ಕುಮಾರಿ ಇಬ್ಬರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಕಳೆದ 2017ರಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಶಾಲೆಯಿಂದ ಮನೆಗೆ ಕರೆತರಲು ಸಂತ್ರಸ್ತೆಯ ತಂದೆ ತಿಳಿಸಿದ್ದನ್ನು ಕಲ್ಯಾಣ್ ದುರುಪಯೋಗಪಡಿಸಿಕೊಂಡಿದ್ದಾನೆ. ಮನೆಗೆ ಕರೆತರುವ ಬದಲಿಗೆ ದ್ವಿಚಕ್ರ ವಾಹನದಲ್ಲಿ ಅಪ್ರಾಪ್ತೆಯನ್ನು ಕೆರೆಯಂಗಳಕ್ಕೆ ಕರೆದುಕೊಂಡುಹೋಗಿ ಅತ್ಯಾಚಾರ ಎಸಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ವೃತ್ತ ನಿರೀಕ್ಷಕ ಜೆ.ಎನ್.ಆನಂದ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಲಕ್ಷ್ಮೀನರಸಿಂಹಪ್ಪ ವಾದ ಮಂಡಿಸಿದ್ದರು.
ಮದುವೆ ನೆಪದಲ್ಲಿ ಅತ್ಯಾಚಾರ
ಕಳೆದ 2021ನೇ ಸಾಲಿನ ಡಿಸೆಂಬರ್‌ನಲ್ಲಿ ಮದುವೆಯಾಗುವುದಾಗಿ ನಂಬಿಸಿ, ಅಪ್ರಾಪ್ತೆ ಮೇಲೆ ಕೆ.ಸುರೇಶ್ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಸಂತ್ರಸ್ತೆ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪೂರ್ಣಗೊಳಿಸಿ ಪೊಲೀಸ್ ಇನ್‌ಸ್ಪೆಕ್ಟರ್ ವಿಶ್ವಾಸ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಅರುಣಸಾಕ್ಷಿ ವಾದ ಮಂಡಿಸಿದ್ದರು.