ತಪತೇಶ್ವರಸ್ವಾಮಿ ದೇಗುಲದಲ್ಲಿದ್ದ 2 ಲಿಂಗ ನಾಪತ್ತೆ

FotoJet
Published on

 ದುಷ್ಕರ್ಮಿಗಳ ಕೃತ್ಯ | ಕಾರ್ತಿಕ ಸೋಮವಾರ ಪೂಜೆಗೆ ತೆರಳಿದಾಗ ಪ್ರಕರಣ ಬೆಳಕಿಗೆ

ಚಿಂತಾಮಣಿ : ತಾಲೂಕಿನ ಕೈವಾರ ಹೋಬಳಿಯ ಚಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ತಪತೇಶ್ವರ ಸ್ವಾಮಿ ಬೆಟ್ಟದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿರುವ ದೇವಸ್ಥಾನದಲ್ಲಿದ್ದ ಎರಡು ಲಿಂಗಗಳು ನಾಪತ್ತೆಯಾಗಿವೆ.

ತಪತೇಶ್ವರಸ್ವಾಮಿ ಬೆಟ್ಟದ ದುರ್ಗಮ ಸ್ಥಳದಲ್ಲಿ ಹಾಗೂ ಕಡಿದಾದ ಇಳಿಜಾರು ಜಾಗದಲ್ಲಿರುವ ಸ್ಥಳದಲ್ಲಿ ಹಲವು ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ್ದ ಎರಡು ಲಿಂಗಗಳನ್ನು 1990ರ ಜನವರಿಯಲ್ಲಿ ದುಷ್ಕರ್ಮಿಗಳು ಒಡೆದು ಭಿನ್ನ ಮಾಡಿದ್ದರು. ಆಗ ಅರ್ಚಕ ಕೆಂದನಹಳ್ಳಿಯ ಕೆ.ಎ. ಶ್ರೀನಿವಾಸಪ್ಪ ಅವರು ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಿ, ಅವರಿಂದ ಅನುಮತಿ ಪಡೆದು ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ ಮತ್ತೆ ಹೊಸದಾಗಿ ಎರಡು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು. ಈಗ ಈ ಲಿಂಗಗಳೂ ನಾಪತ್ತೆಯಾಗಿವೆ.

ಲಿಂಗಗಳಿದ್ದ ಜಾಗದಲ್ಲಿ ಸುತ್ತಲೂ ಗುಂಡಿ ತೆಗೆದು ಲಿಂಗಗಳನ್ನು ಹೊತ್ತೊಯ್ದಿದ್ದಾರೆ ಎಂದು ಶಂಕೆ ವ್ಯಕ್ತವಾದರೆ, ಇನ್ನೊಂದೆಡೆ ಕಳ್ಳರು ನಿಧಿಗಾಗಿ ಗುಂಡಿ ತೆಗೆದಿದ್ದರೆ ಶಿವಲಿಂಗಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದರು ಎನ್ನಲಾಗಿದೆ. ಸದಾ ಜೇನುನೊಣಗಳಿರುವ, ಸತ್ಯ ಹಾಗೂ ಪವಿತ್ರ ಸ್ಥಳದಲ್ಲಿ ಕೊಳ ಇದ್ದು, ಅದರ ಪಕ್ಕದಲ್ಲೇ ಇದ್ದ ತಪತೇಶ್ವರ ಸ್ವಾಮಿ ದೇವಾಲಯದ ಲಿಂಗಗಳನ್ನು ಕಿಡಿಗೇಡಿಗಳು ರಾತ್ರಿ ಹೊತ್ತಿನಲ್ಲಿ ದುಷ್ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಹಲವು ದಶಕಗಳಿಂದ ಈ ದೇವಸ್ಥಾನದಲ್ಲಿ ತಾಲೂಕಿನ ಕೆಂದನಹಳ್ಳಿಯ 75 ವರ್ಷ ಶ್ರೀನಿವಾಸಪ್ಪ ಮತ್ತು ಅವರ ಮಗ ಶಿವರಾಜು ಪೂಜೆ ಸಲ್ಲಿಸುತ್ತಿದ್ದು, ಕಾರ್ತಿಕ ಸೋಮವಾರದಂದು ಪೂಜೆಗೆಂದು ಹೋದಾಗ ಲಿಂಗಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ವಿಷಯವನ್ನು ಕೈವಾರ ಹೊರಠಾಣೆ ಎಎಸ್‌ಐ ಪ್ರಕಾಶ್ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಮಂಗಳವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿ ತಹಸೀಲ್ದಾರ್ ಗಮನಕ್ಕೆ ತಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net