

ಚಿಂತಾಮಣಿ: ನಗರದಲ್ಲಿ ಖತರ್ನಾಕ್ ಕಳ್ಳರ ಹಾವಳಿ ತೀವ್ರವಾಗಿದೆ. ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಕಾರಿನ ಕಿಟಿಕಿಯ ಗಾಜು ಒಡೆದು ಒಳಗಿಟ್ಟಿದ್ದ 2 ಲಕ್ಷ ರೂ.ಗಳನ್ನು ದೋಚಿರುವ ಘಟನೆ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಪಟೇಲ್ ಹೋಟೆಲ್ ಎದುರು ಬುಧವಾರ ಬೆಳಗ್ಗೆ 11.30ರ ಸುಮಾರಿನಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ನಿವಾಸಿ, ವಕೀಲ ಶಿವಕುಮಾರ್ ಹಣ ಕಳೆದುಕೊಂಡವರು. ಇವರು ಮರದ ಬುಡ ಕಟ್ಟಿಂಗ್ ಯಂತ್ರ ಖರೀದಿಗಾಗಿ ಚಿಂತಾಮಣಿಯ ಅಂಬೇಡ್ಕರ್ ಭವನದ ಹಿಂಭಾಗದಲ್ಲಿರುವ ೈರೋಜ್ ಬಳಿ ಬಂದಿದ್ದು, ವ್ಯಾಪಾರ ಗಿಟ್ಟದ ಕಾರಣ ಅಲ್ಲಿಂದ ಪಟೇಲ್ ಹೋಟೆಲ್‌ಗೆ ಬಂದಿದ್ದಾರೆ. ಹೋಟೆಲ್ ಮುಂದೆ ಕಾರು ನಿಲ್ಲಿಸಿ ಒಳಗೆೆ ಹೋಗಿ ವಾಪಸಾಗುವಷ್ಟರಲ್ಲಿ ಕಾರಿನ ಚಾಲಕನ ಪಕ್ಕದ ಸೀಟಿನ ಕಿಟಿಕಿ ಗಾಜು ಒಡೆದು 2 ಲಕ್ಷ ರೂ.ಗಳನ್ನು ದೋಚಿದ್ದಾನೆ.
ಹೋಟೆಲ್‌ನಿಂದ ಬಂದ ಶಿವಕುಮಾರ್ ಕಿಟಿಕಿ ಗಾಜು ಪುಡಿಯಾಗಿರುವುದು ಹಾಗೂ ಕಾರಿನಲ್ಲಿಟ್ಟಿದ್ದ 2 ಲಕ್ಷ ರೂ. ಕಳವಾಗಿರುವ ಬಗ್ಗೆ ನಗರ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಪಿ. ಮುರಳೀಧರ ಮತ್ತು ಇನ್‌ಸ್ಪೆಕ್ಟರ್ ವಿಜಿಕುಮಾರ್ ಹಾಗೂ ಅಪರಾಧ ದಳದ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಹೋಟೆಲ್‌ನಲ್ಲಿರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದು, 11-33ರಲ್ಲಿ ಕಿಟಕಿ ಗಾಜು ಪುಡಿ ಮಾಡಿ ನಗದು ದೋಚಿ ಹೋಗುತ್ತಿರುವುದು ಕಂಡುಬಂದಿದೆ. ಶಿವಕುಮಾರ್ ನೀಡಿದ ದೂರಿನ ಮೇರೆಗೆ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಂಗಳೊಳಗೆ 3ನೇ ಪ್ರಕರಣ
ಜು.15ರಂದು ನಗರದ ಎನ್.ಆರ್.ಬಡಾವಣೆಯ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಂದಿರದ ಎದುರು ಈರುಳ್ಳಿ ಕೃಷ್ಣಾರೆಡ್ಡಿ ಎಂಬವರು ಕಾರು ನಿಲ್ಲಿಸಿ ದೇವಸ್ಥಾನದೊಳಗೆ ಹೋಗಿ ಬರುವಷ್ಟರಲ್ಲಿ ಕಾರಿನ ಕಿಟಕಿ ಗಾಜು ಒಡೆದು 5 ಲಕ್ಷ ರೂ.ಗಳನ್ನು ಕಳವು ಮಾಡಿದ್ದರು. ಇದರ ಬೆನ್ನಲ್ಲೇ ಆ.9ರಂದು ಎಪಿಎಂಸಿ ಮಾರುಕಟ್ಟೆಯ ದವಸಧಾನ್ಯ ಮಾರುಕಟ್ಟೆಯಲ್ಲಿರುವ ರಮೇಶ್ ಟ್ರೇಡರ್ಸ್‌ನ ಪಿ.ಜಿ.ನಾಗರಾಜ್ ಅಂಗಡಿಗೆ ಮುಸುಕಿನ ಜೋಳ ಖರೀದಿ ನೆಪದಲ್ಲಿ ಬಂದವರು ಮಾಲೀಕನ ಗಮನ ಬೇರೆಡೆಗೆ ಸೆಳೆದು ಗಲ್ಲಾಪೆಟ್ಟಿಗೆಯಲ್ಲಿಟ್ಟಿದ್ದ 2.50 ಲಕ್ಷ ರೂ.ಗಳನ್ನು ದೋಚಿದ್ದರು. ಇವೆರಡು ಪ್ರಕರಣವಲ್ಲದೆ, ಇಂದು (ಆ.14) ನಡೆದಿರುವ ಪ್ರಕರಣ ಸೇರಿ ಕಳೆದ 30 ದಿನದೊಳಗೆ ನಡೆದಿರುವ 3ನೇ ಪ್ರಕರಣ ಇದಾಗಿದೆ. ನಗರದಲ್ಲಿ ಆಗಾಗ ಇಂಥ ಪ್ರಕರಣಗಳು ಮರುಕಳಿಸುತ್ತಲೇ ಇವೆ.