ಮತ್ತಿಬ್ಬರಲ್ಲಿ ಕರೊನಾ ಪಾಸಿಟಿವ್

corona
Published on

ವಿಜಯವಾಣಿ ಸುದ್ದಿಜಾಲ ಹಾವೇರಿ

ಕರೊನಾ ಸೋಂಕಿನಿಂದ ಚಿಕಿತ್ಸೆಗೆ ದಾಖಲಾಗಿದ್ದ 21 ರೋಗಿಗಳು ಹಂತಹಂತವಾಗಿ ಗುಣವಾಗಿ ಶುಕ್ರವಾರವಷ್ಟೇ ಆಸ್ಪತ್ರೆಯಲ್ಲಿ ಸೋಂಕಿತರ ಸಂಖ್ಯೆ ಸೂನ್ನೆಗೆ ಇಳಿದಿತ್ತು. ಆದರೆ, ಶನಿವಾರ ಮತ್ತಿಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ತಾಲೂಕಿನ ಕೋಳೂರ ಗ್ರಾಮದ 23 ವರ್ಷದ ಪುರುಷ ಹಾಗೂ ಹಾವೇರಿಯ 34 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಹಾವೇರಿ ನಗರಕ್ಕೂ ಸೋಂಕು ವಕ್ಕರಿಸಿದಂತಾಗಿದೆ.

ಕೋಳೂರನ 23 ವರ್ಷದ ಪುರುಷ ಮಾರ್ಚ್​ನಲ್ಲಿ ತಮ್ಮ ಸಂಬಂಧಿಯನ್ನು ಕರೆತರಲು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಓಲ್ಡ್ ಫಿಶ್ ಮಾರುಕಟ್ಟೆಗೆ ತೆರಳಿದ್ದ. ಆ ಸಮಯದಲ್ಲಿ ಲಾಕ್​ಡೌನ್ ಘೊಷಣೆಯಾಗಿದ್ದರಿಂದ ಅಲ್ಲಿಯೇ ವಾಸವಾಗಿದ್ದ. ಲಾಕ್​ಡೌನ್ ಸಡಿಲಿಕೆ ನಂತರ ಹಾವೇರಿ ಮೂಲದ ಅವರ ಸಂಬಂಧಿ 34 ವರ್ಷದ ಮಹಿಳೆಯನ್ನು ಕರೆದುಕೊಂಡು ಮುಂಬೈನಿಂದ ರೈಲ್ವೆ ಮೂಲಕ ಗದಗ ನಗರಕ್ಕೆ ಜೂ. 6ರಂದು ಬಂದಿದ್ದರು. ಅಲ್ಲಿಂದ ಬಸ್ ಮೂಲಕ ಹಾವೇರಿಗೆ ಬಂದ ಅವರನ್ನು ತಪಾಸಣೆ ನಡೆಸಿ ನಗರದ ಹೊರವಲಯದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಜೂ. 10ರಂದು ಇಬ್ಬರ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಜೂ. 12ರಂದು ಸಂಜೆ ವರದಿ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಈ ಇಬ್ಬರು ಸೋಂಕಿತರೊಂದಿಗೆ ಜೂ. 3ರಂದು ಗದಗನಿಂದ ಹಾವೇರಿಗೆ ಕೆಎ-27 ಎಫ್-675 ಬಸ್​ನಲ್ಲಿ ಸಹ ಪ್ರಯಾಣ ಮಾಡಿದ ಪ್ರಯಾಣಿಕರೆಲ್ಲರೂ ನಗರದ ಜಿಲ್ಲಾಸ್ಪತ್ರೆಯ ಹತ್ತಿರದ ಕೆಇಬಿ ಕಲ್ಯಾಣಮಂಟಪದಲ್ಲಿರುವ ಜ್ವರ ತಪಾಸಣೆ ಕೇಂದ್ರಕ್ಕೆ ಆಗಮಿಸಿ ತಪಾಸಣೆಗೆ ಒಳಪಡಬೇಕು. ಈ ಬಸ್​ನಲ್ಲಿ ಕಾರ್ಯನಿರ್ವಹಿಸಿದ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸಹ ತಪಾಸಣೆಗೆ ಒಳಪಡಬೇಕು ಎಂದು ಸೂಚನೆ ನೀಡುವಂತೆ ವಿಭಾಗೀಯ ನಿಯಂತ್ರಕರಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಕೃಷ್ಣ ಬಾಜಪೈ ತಿಳಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕ್ವಾರಂಟೈನ್ ಸೆಂಟರ್​ನ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ಸುತ್ತಲಿನ 200 ಮೀಟರ್ ಪ್ರದೇಶವನ್ನು ಬಫರ್ ಜೋನ್ ಆಗಿ ಪರಿಗಣಿಸಲಾಗಿದೆ. ಹಾವೇರಿ ಎಸಿ ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ.

ಶಿಗ್ಗಾಂವಿ ಪಟ್ಟಣದ ವೃದ್ಧೆ ಕಿಮ್ಸ್​ಗೆ ದಾಖಲು: ಶಿಗ್ಗಾಂವಿ ಪಟ್ಟಣದ ಗೌಡರ ಓಣಿಯ 72 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದ್ದು, ಕಿಮ್ಸ್​ನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಪ್ರಕರಣ ಧಾರವಾಡ ಜಿಲ್ಲೆಗೆ ದಾಖಲಾಗಿದೆ. ವೃದ್ಧೆಗೆ ಜೂ. 8ರಂದು ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಉಲ್ಬಣಗೊಂಡ ಕಾರಣ ರಾತ್ರಿ ಶಿಗ್ಗಾಂವಿ ಪಟ್ಟಣದ ತೋಟಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮರಳಿ ಮನೆಗೆ ಕರೆದುಕೊಂಡು ಹೋಗಿದ್ದರು. ಮರುದಿನ ಜೂ. 9ರಂದು ತಮ್ಮ ಸ್ವಂತ ಕಾರು ಕೆಎ-30, ಎಂ-1435ರಲ್ಲಿ ಹುಬ್ಬಳ್ಳಿಯ ತತ್ವಾದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಜ್ವರ ಜಾಸ್ತಿಯಾದಾಗ ವೈದ್ಯರ ಸಲಹೆ ಮೇರೆಗೆ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲು ಮಾಡಲಾಗಿತ್ತು. ಮಹಿಳೆಯ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ಮಹಿಳೆ ವಾಸವಿದ್ದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ.

96 ಜನರ ಗಂಟಲ ದ್ರವ ಮಾದರಿ ಪರೀಕ್ಷೆಗೆ: ಹಾವೇರಿ ಜಿಲ್ಲೆಯಲ್ಲಿ ಕರೊನಾ ಲಕ್ಷಣಗಳ ಆಧಾರದ ಮೇಲೆ ಶನಿವಾರ 96 ಜನರ ಗಂಟಲ ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 94 ಜನರ ವರದಿ ನೆಗೆಟಿವ್ ಬಂದಿದೆ. ಇಬ್ಬರಿಗೆ ಕರೊನಾ ದೃಢಪಟ್ಟಿದೆ ಎಂದು ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 23 ಕರೊನಾ ಪ್ರಕರಣ ದೃಢಪಟ್ಟಿದ್ದು, 21

ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕರೊನಾ ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕದಲ್ಲಿರುವ 506 ಜನರನ್ನು ಕ್ವಾರಂಟೈನ್​ನಲ್ಲಿಟ್ಟು ನಿಗಾ ವಹಿಸಲಾಗಿದೆ. ಕರೊನಾ ಲಕ್ಷಣಗಳ ಆಧಾರ ಮೇಲೆ ಈವರೆಗೆ ಒಟ್ಟು 8,297 ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 8,225 ಜನರ ವರದಿ ನೆಗೆಟಿವ್ ಬಂದಿವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net