2.67 ಕೋಟಿ ರೂ.ಸಂಗ್ರಹ

24 HANUR 7
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಹುಂಡಿ ಎಣಿಕೆ ಮಾಡಲಾಗಿದ್ದು ಈ ಬಾರಿ 34 ದಿನದ ಅವಧಿಯಲ್ಲಿ 2.67 ಕೋಟಿ ರೂ.ಸಂಗ್ರಹವಾಗಿದೆ.

ಬೆಳಗ್ಗೆ 6.30ಗಂಟೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ದೇಗುಲದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಂಗ್ರಹವಾಗಿದ್ದ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಚೀಲದಲ್ಲಿರಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ವಿಶಾಲ ಕೊಠಡಿಗೆ ರವಾನಿಸಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಆರಂಭಿಸಲಾಯಿತು. ಎಣಿಕೆ ಕಾರ್ಯವು ರಾತ್ರಿ 8.20 ರವರೆಗೂ ನಡೆಯಿತು.

ಈ ಬಾರಿ ಕಡೇ ಕಾರ್ತಿಕ ಸೋಮವಾರ, ಅಮಾವಾಸ್ಯೆ ಹಾಗೂ ಸರ್ಕಾರಿ ರಜೆ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು. ಇ-ಹುಂಡಿ ಹಣ 3,39,258 ರೂ. ಸೇರಿದಂತೆ 2,67,99,396 ರೂ. ನಗದು, 73 ಗ್ರಾಂ ಚಿನ್ನ ಹಾಗೂ 3 ಕೆ.ಜಿ 900 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಕಳೆದ ಬಾರಿ ನ.20 ರಂದು ನಡೆದ ಹುಂಡಿ ಎಣಿಕೆಯಲ್ಲಿ 27 ದಿನದ ಅವಧಿಯಲ್ಲಿ ಇ-ಹುಂಡಿ ಹಣ 2,50,666 ರೂ.ಸೇರಿದಂತೆ 2,43,65,775 ರೂ.ನಗದು, 62 ಗ್ರಾಂ ಚಿನ್ನ ಹಾಗೂ 2.512 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು.

ಚಲಾವಣೆಯಲ್ಲಿ ಇಲ್ಲದ 2 ಸಾವಿರ ರೂ.ಮುಖಬೆಲೆಯ 21 ನೋಟುಗಳು, 3 ವಿದೇಶಿ ಕರೆನ್ಸಿ ದೊರೆತಿವೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಉಪ ಕಾರ್ಯದರ್ಶಿ ಜಿ.ಎಲ್. ಚಂದ್ರಶೇಖರ್, ಲೆಕ್ಕ ಪತ್ರ ಸಲಹೆಗಾರ ನಾಗೇಶ್, ಲೆಕ್ಕ ಅಧೀಕ್ಷಕ ಗುರುಮಲ್ಲಯ್ಯ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹರೀಶ್, ಬ್ಯಾಂಕ್ ಆಫ್ ಬರೋಡಾ, ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net