ಇಡಿ ಹೆಸರಿನಲ್ಲಿ 2.2 ಲಕ್ಷ ರೂ. ವಂಚನೆ

3.75 lakh Rs. Cyber fraud
Published on

ರಾಮನಗರ: ಜಾರಿ ನಿರ್ದೇಶನಾಲಯದ (ಇಡಿ) ಹೆಸರಲ್ಲಿ ಬೆದರಿಸಿ ವ್ಯಕ್ತಿಯೊಬ್ಬರಿಂದ 2.2 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣ ಕುಂಬಳಗೂಡು ಠಾಣೆಯಲ್ಲಿ ದಾಖಲಾಗಿದೆ.

ಕೆಂಗೇರಿ ಸಮೀಪದ ಹುಣಸೇಮರದ ಪಾಳ್ಯದ ನಿವಾಸಿ ಗಿರೀಶ್​ ಹಣ ಕಳೆದುಕೊಂಡವರು. ಮಂಗಳವಾರ ಬೆಳಗ್ಗೆ ಅಪರಿಚಿತ ಮೊಬೈಲ್​ ಸಂಖ್ಯೆಯಿಂದ ಕರೆಯೊಂದು ಬಂದಿದ್ದು, ನೀವು ಮುಂಬೈ ಮೂಲಕ ಚೀನಾಗೆ ಕಳುಹಿಸಿರುವ ಪಾರ್ಸಲ್​ನಲ್ಲಿ ಅಕ್ರಮ ವಸ್ತುಗಳು ಪತ್ತೆಯಾಗಿದ್ದು, ಇವುಗಳನ್ನು ಮುಂಬೈ ಕಸ್ಟ್ಂ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನೀವು ಇತ್ತೀಚಿಗೆ ಮುಂಬೈಗೆ ಬಂದಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಅಪರಿಚಿತನ ಪ್ರಶ್ನೆಗೆ ಗಿರೀಶ್​ ಹೌದು ಎಂದು ಉತ್ತರಿಸಿದ್ದಾರೆ. ನಂತರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ಮುಂಬೈ ಪೊಲೀಸರಿಗೆ ಕರೆಯನ್ನು ವರ್ಗಾವಣೆ ಮಾಡುತ್ತೇನೆ ಎಂದು ಹೇಳಿ ಮತ್ತೊಂದು ಸಂಖ್ಯೆಗೆ ವರ್ಗಾವಣೆ ಮಾಡಿದ್ದಾನೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ, ಇದು ರಾಷ್ಟ್ರೀಯ ಗೌಪ್ಯತೆ ಕಾಪಾಡುವ ಮಾಹಿತಿ. ಆದ್ದರಿಂದ ನಿಮ್ಮನ್ನು ವಿಡಿಯೋ ಮೂಲಕವೇ ವಿಚಾರಣೆ ಮಾಡಲಾಗುತ್ತದೆ. ಇದನ್ನು ನಿಮ್ಮ ಪತ್ನಿಗೂ ತಿಳಿಸಬೇಡಿ ಎನ್ನುವ ನಿರ್ದೇಶನ ನೀಡಿ, ಸ್ಕೈಪೇ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುವಂತೆ ಹೇಳಿದ್ದಾನೆ.

ನಂತರ ಈ ಆ್ಯಪ್​ ಮೂಲಕವೇ ಸುಮಾರು 2 ಗಂಟೆ ವಿಚಾರಣೆ ನಡೆಸಿ ನಿಮ್ಮ ಬಳಿ ಇರುವ ಹಣ ಅಕ್ರಮವಾಗಿದೆ ಎಂದು ಹೇಳಿ ಅವರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.

ಇದಾದ ನಂತರ ಅನುಮಾನಗೊಂಡ ಗಿರೀಶ್​, ವಿಡಿಯೋ ಸ್ವಿಚ್​ಆನ್​ ಮಾಡುವಂತೆ ಹೇಳಿದಾಗ, ಇದು ಗುಪ್ತಚರ ವಿಚಾರ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಮಾತನಾಡುತ್ತಿದ್ದವ ಹೇಳಿದ್ದಾನೆ. ಈ ವೇಳೆ ಮೋಸ ಹೋಗಿರುವುದನ್ನು ಅರಿತ ಗಿರೀಶ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net