ವಚನ ಸಾಹಿತ್ಯ, ಪರಿಸರ ಸಂರಕ್ಷಿಸಿ

myk 001
Published on

ಮಾಯಕೊಂಡ: 21ನೇ ಶತಮಾನದ ಬಸವಾದಿ ಶರಣರು ಸಮಾಜಕ್ಕೆ ನೀಡಿರುವ ವಚನ ಸಾಹಿತ್ಯ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿಗಾಗಿ ಹೊಳಲ್ಕೆರೆಯ ಒಂಟಿಕಂಬದ ಶ್ರೀ ಮುರುಘಾಮಠದಿಂದ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಸನ್ನಿಧಿಯವರೆಗೂ 19 ದಿನಗಳ ನಿರಂತರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೊಳಲ್ಕೆರೆ ಒಂಟಿಕಂಬ ಮುರುಘಾಮಠದ ಶ್ರೀ ತಿಪ್ಪೇರುದ್ರ ಸ್ವಾಮೀಜಿ ತಿಳಿಸಿದರು.

ಸೋಮವಾರ ಮುರುಘಾಮಠದಿಂದ ಪಾದಯಾತ್ರೆ ಆರಂಭಿಸಿದ ಶ್ರೀಗಳು ಚಿಕ್ಕಜಾಜೂರಿನಲ್ಲಿ ರಾತ್ರಿ ವಾಸ್ತವ್ಯ ಮಾಡಿ, ಮಂಗಳವಾರ ಹೊಳಲ್ಕೆರೆ ತಾಲೂಕಿನ ಬಿ ದುರ್ಗ ಸಾಸಲು ಹಳ್ಳ ಮಾರ್ಗವಾಗಿ ದಾವಣಗೆರೆಯ ಹುಚ್ಚವನಹಳ್ಳಿ ಗ್ರಾಮಕ್ಕೆ ಆಗಮಿಸಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.

ಇಂದಿನ ಆಧುನಿಕ ಕಾಲಘಟ್ಟದಲ್ಲಿ ವಚನ ಸಾಹಿತ್ಯ ಸಂರಕ್ಷಿಸಿ, ಜಾಗೃತಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಜತೆಗೆ ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದರು.

ಪಾದ ಎಂದರೆ ಆಧ್ಯಾತ್ಮದಲ್ಲಿ ಜ್ಞಾನ ಹಾಗೂ ಅರಿವು ಎಂದರ್ಥ. ಪ್ರತಿಯೊಬ್ಬರೂ ಜ್ಞಾನದ ಮತ್ತು ಅರಿವಿನೆಡೆಗೆ ಸಾಗಬೇಕು ಎನ್ನುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು, ಚಿಕ್ಕಜಾಜೂರು, ಮಾಯಕೊಂಡ, ದಾವಣಗೆರೆ, ಹಾವೇರಿ ಮಾರ್ಗವಾಗಿ ಹಳಿಯಾಳ, ದಾಂಡೇಲಿ ಮೂಲಕ ಫೆಬ್ರವರಿ 5 ರಂದು ಶ್ರೀ ಕ್ಷೇತ್ರ ಉಳವಿ ಚನ್ನಬಸವಣ್ಣನವರ ಮಹಾಮನೆಗೆ ತಲುಪಲಿದೆ ಎಂದರು.

ರೈತ ಚಿಂತಕ ಆವರಗೆರೆ ರುದ್ರಮುನಿ ಮಾತನಾಡಿ, ಕನ್ನಡ ನಾಡು ಸರ್ವ ಜನಾಂಗದ ಬೀಡು, ಶರಣ-ಸಂತರು ಬದುಕಿದ ಈ ಮಣ್ಣಿನಲ್ಲಿ ಅವರ ವಚನ, ಆದರ್ಶ ತತ್ವ, ನೈತಿಕ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕ ಎಂದರು.

ಹೊಳಲ್ಕೆರೆ ಅಜಯ್, ರಂಗಸ್ವಾಮಿ, ಚಂದ್ರಪ್ಪ, ಹುಚ್ಚವನಹಳ್ಳಿ ಗ್ರಾಮದ ಎಚ್.ಬಿ. ಸದಾಶಿವ್, ಆರ್. ಕುಬೇರಪ್ಪ, ಎಸ್.ಬಿ ಬಸವರಾಜಪ್ಪ, ಪಿ.ಕೆ. ಯೋಗೇಶ್, ಬಿ.ಎಸ್. ದೇವರಾಜ್, ಲೋಹಿತ್ ಕುಮಾರ್, ರಮೇಶ್ ರಾಜಪ್ಪ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net