ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಗುರುತಿಸಲಾದ ಜೋಡಿ ಗ್ರಾಮಗಳಲ್ಲಿ 5,812 ಪಹಣಿಗಳ ಪೈಕಿ 1,879 ಪಹಣಿಗಳನ್ನು ಇಂಡೀಕರಣಗೊಳಿಸಲಾಗಿದೆ.
ಜೋಡಿ ಗ್ರಾಮಗಳಲ್ಲಿ ಅಗತ್ಯ ದಾಖಲೆ ಹೊಂದಿರದೇ ರೈತರು ತೊಂದರೆ ಅನುಭವಿಸುತ್ತಿದ್ದು, ಇತ್ಯರ್ಥಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ಕೈಗೊಂಡು, ನಿಯಮಾನುಸಾರ ಪಹಣಿಗಳನ್ನು ಸಿದ್ಧಪಡಿಸಿ ರೈತರಿಗೆ ವಿತರಿಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ರಾಜಾಡಳಿತದ ವೇಳೆ ಗ್ರಾಮದಲ್ಲಿನ ಉನ್ನತ ವ್ಯಕ್ತಿಗಳಿಗೆ ರಾಜರು ಬಳುವಳಿಯಾಗಿ ಇಡೀ ಗ್ರಾಮದ ಮಾಲೀಕತ್ವವನ್ನು ಉಚಿತವಾಗಿ ನೀಡಿದ್ದು, ಇಂತಹ ಇನಾಂ ಗ್ರಾಮಗಳನ್ನು ಜೋಡಿ ಗ್ರಾಮಗಳೆಂದು ಕರೆಯಲಾಗುತ್ತದೆ. ಇನ್ನು ಸ್ವಾತಂತ್ರ್ಯ ನಂತರ ಇನಾಂ ಅಬಾಲಿಷನ್ ಕಾಯ್ದೆ 1954ರಂತೆ ಉಳುಮೆ ಮಾಡುತ್ತಿದ್ದ ರೈತರಿಗೆ ಜಮೀನು ಮಂಜೂರು ಮಾಡಿ, ಸರ್ವೇ, ಹಳೇ ನಂಬರ್ ಮತ್ತು ಹೊಸ ಸರ್ವೇ ನಂಬರ್ ದಾಖಲಿಸಿ, ಪಹಣಿ ಇಂಡೀಕರಣಗೊಳಿಸಲಾಗಿದೆ. ಇದರ ನಡುವೆ ಕೆಲ ಗ್ರಾಮಗಳಲ್ಲಿ ಅಗತ್ಯ ದಾಖಲೆಗಳ ಅಲಭ್ಯತೆಯಿಂದಾಗಿ 60 ವರ್ಷಗಳಿಂದಲೂ ಪಹಣಿಗಳಲ್ಲಿ ಹಳೇ ಸರ್ವೇ ನಂಬರ್ ಇದ್ದು, ಆಕಾರಬಂದ್, ಟಿಪ್ಪಣಿಗಳಲ್ಲಿ ಮಾತ್ರ ಹೊಸ ಸರ್ವೇ ನಂಬರ್ ಇದ್ದು, ಇದರಿಂದ ರೈತರಿಗೆ 11ಇ ನಕ್ಷೆ ಪಡೆಯಲು, ಇಬ್ಭಾಗ ಮತ್ತು ಮಾರಲು ಸಾಧ್ಯವಾಗುವುದಿಲ್ಲ. ಇಂತಹ ಸಮಸ್ಯಾತ್ಮಕ 28 ಗ್ರಾಮಗಳು ಜಿಲ್ಲೆಯಲ್ಲಿವೆ.
ನಿಯಮಾನುಸಾರ ಸರ್ವೇ
ಕಂದಾಯ ಸಚಿವರ ಆದೇಶದ ಹಿನ್ನೆಲೆಯಲ್ಲಿ ಜೋಡಿ ಗ್ರಾಮಗಳನ್ನು ಗುರುತಿಸಿ, ಅವಶ್ಯಕ ದಾಖಲೆಗಳನ್ನಾಧಾರಿಸಿ ರೈತರಿಗೆ ಪಹಣಿಗಳನ್ನು ಸೃಜಿಸಿಕೊಡಲಾಗುತ್ತಿದೆ. ಗೋಲ್ ನಕ್ಷೆ, ಟಿಪ್ಪಣಿ ಪುಸ್ತಕ, ಪ್ರಸ್ತುತ ಚಾಲ್ತಿಯಲ್ಲಿನ ಗ್ರಾಮ ನಕಾಶೆ, ಇತರ ಕಂದಾಯ ಮತ್ತು ಸರ್ವೇ ದಾಖಲೆ ಮತ್ತು ಸ್ಥಳ ಪರಿಶೀಲನೆ ಬಳಿಕ ಭೂಮಾಪಕರಿಂದ ನೋಂದಣಿ ದಾಖಲೆಯನ್ನು ತಯಾರಿಸಲಾಗಿದೆ. ಇದಕ್ಕೆ ಕಂದಾಯ ಇಲಾಖೆಯಿಂದ ಅನುಮೋದನೆ ಪಡೆದು, ಪಹಣಿ ಇಂಡೀಕರಣಗೊಳಿಸಲಾಗಿದೆ. ಬಹು ಮಾಲೀಕತ್ವ ಹೊಂದಿರುವ, ವಿಸ್ತೀರ್ಣ ವ್ಯತ್ಯಾಸದ ಹಿಡುವಳಿದಾರರಿಂದ ಒಪ್ಪಿಗೆ ಪತ್ರ ಪಡೆದು, ಪಹಣಿಗಳನ್ನು ಸೃಜಿಸುವ ಕೆಲಸವೂ ಪ್ರಗತಿಯಲ್ಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯ ಜೋಡಿ ಗ್ರಾಮಗಳು
ಜಿಲ್ಲೆಯ 8 ಹೋಬಳಿ ವ್ಯಾಪ್ತಿಯಲ್ಲಿ 25 ಜೋಡಿ ಗ್ರಾಮಗಳನ್ನು ಗುರುತಿಸಿದ್ದು, ಅರ್ಹರಿಗೆ ಪಹಣಿ ಸೇರಿ ಅಗತ್ಯ ದಾಖಲೆ ಒದಗಿಸಲಾಗುತ್ತಿದೆ. ಚಿಂತಾಮಣಿ ತಾಲೂಕಿನ ಚಿಲಕಲನೇರ್ಪುವಿನ ಮರಬಹಳ್ಳಿ, ಗಾಜಲವಾರಹಳ್ಳಿ, ಗುರ‌್ರಂಪಲ್ಲಿ, ರಂಗೇನಹಳ್ಳಿ, ಚಿಕ್ಕಕುರುಬರಹಳ್ಳಿ, ಶಿಡ್ಲಘಟ್ಟ ತಾಲೂಕಿನ ಕಸಬಾ ಹೋಬಳಿ ಚಾಗೆ, ಚನ್ನಹಳ್ಳಿ, ಜಂಗಮಕೋಟೆ ಹೋಬಳಿಯ ಮುತ್ತೂರು, ತೊಟ್ಲಗಾನಹಳ್ಳಿ, ಫಕೀರನಹೊಸಹಳ್ಳಿ, ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಯ ಕನ್ನಂಪಲ್ಲಿ, ಚೇಳೂರು ಹೋಬಳಿಯ ಮುದ್ದಲಪಲ್ಲಿ, ಗೌರಿಬಿದನೂರು ತಾಲೂಕಿನ ಕಸಬಾ ಹೋಬಳಿಯ ಕೋನಾಪುರ, ನಗರಗೆರೆ ಹೋಬಳಿಯ ಹುಣಸೇನಹಳ್ಳಿ, ಕೋಡಿಹಳ್ಳಿ, ಮುದ್ದಲಹಳ್ಳಿ, ಕೃಷ್ಣರಾಜಪುರ, ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಮನ್ನಾರಪುರ, ಗೊಲ್ಲಪಡೆ, ನಶಿಕುಂಟೆ ಹೊಸೂರು, ಅಂದಾರ‌್ಲಹಳ್ಳಿ, ಬಂಡಹಳ್ಳಿ, ಚಿಕ್ಕಮುದ್ದೇನಹಳ್ಳಿ, ಸೊಣ್ಣಾಪುರ, ಕಣಿವೆನಾರಾಯಣಪುರ ಜೋಡಿಗ್ರಾಮಗಳಾಗಿವೆ.
ಇಂದು ಪಹಣಿ ವಿತರಣೆ
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೆ.20ರಂದು ಬೆಳಗ್ಗೆ 10 ಗಂಟೆಗೆ ಜೋಡಿ ಗ್ರಾಮಗಳ ಪಹಣಿ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಉದ್ಘಾಟಿಸಲಿದ್ದು, ಶಾಸಕ ಪಿ.ಇ. ಪ್ರದೀಪ್ ಈಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಂಸದರಾದ ಡಾ. ಕೆ.ಸುಧಾಕರ್, ಎಂ. ಮಲ್ಲೇಶ್ ಬಾಬು ಮತ್ತಿತರರು ಭಾಗವಹಿಸಲಿದ್ದಾರೆ.
ತಾಲೂಕು ಜೋಡಿ ಗ್ರಾಮ
ಚಿಕ್ಕಬಳ್ಳಾಪುರ 8
ಗೌರಿಬಿದನೂರು 5
ಬಾಗೇಪಲ್ಲಿ 2
ಶಿಡ್ಲಘಟ್ಟ 5
ಚಿಂತಾಮಣಿ 5