600ರ ಗಡಿ ದಾಟಿದ ಕರೊನಾ ಪಾಸಿಟಿವ್

carona logo
Published on

ವಿಜಯವಾಣಿ ಸುದ್ದಿಜಾಲ ಹಾವೇರಿ

ಜಿಲ್ಲೆಯಲ್ಲಿ ಕರೊನಾ ವೈರಸ್ ನಿಯಂತ್ರಣ ಮೀರಿ ಹರಡುತ್ತಿದ್ದು, ಗುರುವಾರ ಸೋಂಕಿತರ ಸಂಖ್ಯೆ 600ರ ಗಡಿದಾಟಿದೆ. ಇಬ್ಬರು ಸರ್ಕಾರಿ ವೈದ್ಯರು, ಗ್ರಾಮಲೆಕ್ಕಾಧಿಕಾರಿ, ನರ್ಸ್, ಚಾಲಕ ಸೇರಿ 18 ಜನರಿಗೆ ಸೋಂಕು ದೃಢಪಟ್ಟಿದೆ. ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 602ಕ್ಕೇರಿದ್ದು, 220 ಪ್ರಕರಣಗಳು ಸಕ್ರಿಯವಾಗಿವೆ. 362 ಜನರು ಗುಣವಾಗಿ ಬಿಡುಗಡೆಗೊಂಡಿದ್ದಾರೆ. ಹಾವೇರಿ ತಾಲೂಕಿನ 15 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ.

ಶಿಗ್ಗಾಂವಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ 29 ವರ್ಷದ ಸ್ಟಾಫ್ ನರ್ಸ್, ಬಂಕಾಪುರ ಆಸ್ಪತ್ರೆಯ 51 ವರ್ಷದ ಆಂಬುಲೆನ್ಸ್ ಚಾಲಕ, ಬಿಂದಲೆ ಓಣಿಯ 48 ವರ್ಷದ ಪುರುಷ, 35 ವರ್ಷದ ಮಹಿಳೆ, ಯತ್ನಳ್ಳಿಯ 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಹಾವೇರಿ ಬಸವೇಶ್ವರ ನಗರ ಬಿ ಬ್ಲಾಕ್ 17ನೇ ಕ್ರಾಸ್​ನ ನಿವಾಸಿ 48 ವರ್ಷದ ಪುರುಷ, ಕಾಗಿನೆಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾಗಿದ್ದ ಶಿವಾಜಿನಗರದ 25 ವರ್ಷದ ಮಹಿಳೆ ಹಾಗೂ ಕೆಲಕಾರ ಚಾಳದ 42 ವರ್ಷದ ಮಹಿಳೆ, ತಾಲೂಕಿನ ಹಾವನೂರ ಗ್ರಾಮದ 40 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ರಾಣೆಬೆನ್ನೂರ ನಗರದ ಕುರಬರ ಓಣಿಯ 38 ವರ್ಷದ ಮಹಿಳೆ, ಸರ್ಕಾರಿ ಆಸ್ಪತ್ರೆ ವಸತಿ ಗೃಹ ನಿವಾಸಿ 58 ವರ್ಷದ ಪುರುಷ ರಾಣೆಬೆನ್ನೂರ ತಾಲೂಕು ಕೂನಬೇವು ಗ್ರಾಮದ 38 ವರ್ಷದ ಪುರುಷ, ಐರಣಿ ಗ್ರಾಮದ 28 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಬ್ಯಾಡಗಿ ತಾಲೂಕು ಆರೋಗ್ಯಾಧಿಕಾರಿಯಾಗಿದ್ದ 59 ವರ್ಷದ ಪುರುಷ, ಮಾಲೂರಿನ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಸವಣೂರ ತಾಲೂಕು ನಂದಿಹಳ್ಳಿ ಗ್ರಾಮದ ನಿವಾಸಿ 36 ವರ್ಷದ ಪುರುಷ, ಹಾನಗಲ್ಲ ತಾಲೂಕು ಮಾಸನಕಟ್ಟಿ ಗ್ರಾಮದ 42 ವರ್ಷದ ಪುರುಷ, ಹಿರೇಕೆರೂರ ಪಟ್ಟಣದ ಕೌರವ ಶಾಲೆಯ ಬಳಿಯ ನಿವಾಸಿ 38 ವರ್ಷದ ವಾಹನ ಚಾಲಕನಿಗೆ ಸೋಂಕು ತಗುಲಿದೆ.

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೊಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ವೃದ್ಧೆ ಸಾವು: ರಾಣೆಬೆನ್ನೂರ ಉಮಾಶಂಕರ ನಗರದ 68 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಜು. 17ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಅವರ ಸ್ವ್ಯಾಬ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಜು. 22ರಂದು ಮೃತಪಟ್ಟಿದ್ದಾರೆ.

ಶಿಗ್ಗಾಂವಿ, ಹಾವೇರಿಯಲ್ಲಿ ಹೆಚ್ಚಿದ ಪ್ರಕರಣ: ಜಿಲ್ಲೆಯಲ್ಲಿ ಮೊದಲ ಪ್ರಕರಣ ಕಂಡುಬಂದಿದ್ದು ಸವಣೂರ ತಾಲೂಕಿನಲ್ಲಿ. ನಂತರ ಶಿಗ್ಗಾಂವಿ ಹಾಗೂ ಹಾವೇರಿ ತಾಲೂಕಿನಲ್ಲಿ. ಆದರೆ, ಈಗ ಸೋಂಕು ಹರಡುವಿಕೆ ಪ್ರಮಾಣ ಶಿಗ್ಗಾಂವಿ ಹಾಗೂ ಹಾವೇರಿ ತಾಲೂಕಿನಲ್ಲಿಯೇ ಹೆಚ್ಚಾಗುತ್ತಿದೆ. ಈವರೆಗೆ ಶಿಗ್ಗಾಂವಿ ತಾಲೂಕಿನಲ್ಲಿ 156 ಜನರಿಗೆ ಸೋಂಕು ಹರಡಿದ್ದರೆ, ಹಾವೇರಿ ತಾಲೂಕಿನಲ್ಲಿ 133, ರಾಣೆಬೆನ್ನೂರ ತಾಲೂಕಿನಲ್ಲಿ 109 ಜನರಿಗೆ ಹರಡಿದೆ. ಇನ್ನುಳಿದಂತೆ ಹಾನಗಲ್ಲ ತಾಲೂಕಿನಲ್ಲಿ 81, ಹಿರೇಕೆರೂರ 57, ಸವಣೂರ 47, ಬ್ಯಾಡಗಿ ತಾಲೂಕಿನಲ್ಲಿ 19ಜನರಿಗೆ ಸೋಂಕು ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net