ಟಾಟಾ ಏಸ್ ವಾಹನ ಮಗುಚಿ 17 ಜನರಿಗೆ ಗಾಯ

ಟಾಟಾ ಏಸ್ ವಾಹನ ಮಗುಚಿ 17 ಜನರಿಗೆ ಗಾಯ
Published on

ಗುಂಡ್ಲುಪೇಟೆ: ಹೆಗ್ಗಡದೇವನಕೋಟೆಯ ಚಿಕ್ಕದೇವಮ್ಮ ಬೆಟ್ಟಕ್ಕೆ ಹೋಗುತ್ತಿದ್ದ ಟಾಟಾ ಏಸ್ ವಾಹನ ಮಗುಚಿ ಬಿದ್ದ ಪರಿಣಾಮ ಹತ್ತಕ್ಕೂ ಹೆಚ್ಚಿನ ಭಕ್ತರು ಗಾಯಗೊಂಡಿದ್ದಾರೆ.

ತಾಲೂಕಿನ ಅಣ್ಣೂರು ಕೇರಿ ಗ್ರಾಮದ 20ಕ್ಕೂ ಹೆಚ್ಚಿನ ಮಹಿಳೆಯರು ಹಾಗೂ ಪುರುಷರು ಟಾಟಾ ಏಸ್ ವಾಹನದಲ್ಲಿ ಸೋಮವಾರ ಚಿಕ್ಕದೇವಮ್ಮನ ಬೆಟ್ಟಕ್ಕೆ ತೆರಳುತ್ತಿದ್ದರು. ಆಟೋ ಚಾಲಕನ ಅತಿವೇಗ ಹಾಗೂ ನಿರ್ಲಕ್ಷೃದಿಂದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.

ಜಯಂತಿ, ರಾಜಮ್ಮ, ನಾಗಮ್ಮ, ರಾಮೇಗೌಡ, ಮಹದೇವಮ್ಮ, ಕುಮಾರ, ಮಂಜು, ರಂಗಮ್ಮ, ಕೆಂಪರಾಜು, ಚಿಕ್ಕದೇವಮ್ಮ, ಮಂಜು, ಜ್ಯೋತಿ, ಸ್ವಾಮಿ, ಪ್ರೇಮಾ, ಕುಸುಮಾ, ಮಹೇಶ, ರಾಜಶೆಟ್ಟಿ ಎಂಬುವರಿಗೆ ತೀವ್ರ ಪೆಟ್ಟು ಬಿದ್ದಿದೆ.

ರಸ್ತೆಯಲ್ಲಿ ಸಾಗುತ್ತಿದ್ದವರು ವಾಹನದ ಕೆಳಗೆ ಸಿಲುಕಿದ್ದವರನ್ನು ರಕ್ಷಿಸಿದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಹೊಯ್ಸಳ ಪೊಲೀಸರು ಸಾರ್ವಜನಿಕರ ನೆರವಿನಿಂದ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.

ಗಾಯಾಳುಗಳಲ್ಲಿ ಐವರನ್ನು ಜಿಲ್ಲಾಸ್ಪತ್ರೆಗೆ ಮತ್ತು ಏಳು ಜನರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 17 ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಚಾಲಕ ಮತ್ತು ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net