

ಹಾನಗಲ್ಲ: ಪಟ್ಟಣದ ಪಾಳಾ-ಹಾನಗಲ್ಲ ರಸ್ತೆಯ ಬಡಾವಣೆಯೊಂದರ ಖಾಲಿ ನಿವೇಶನದಲ್ಲಿ ವಾಸವಾಗಿರುವ ಕಲಬುರಗಿ, ಬೀದರ್ ಜಿಲ್ಲೆಯ 16 ವಲಸೆ ಕುಟುಂಬಗಳಿಗೆ ಶಾಸಕ ಸಿ.ಎಂ. ಉದಾಸಿ ಮಂಗಳವಾರ ಪಡಿತರ ಸಾಮಗ್ರಿ ವಿತರಣೆಗೆ ವ್ಯವಸ್ಥೆ ಕಲ್ಪಿಸಿದರು.
ಲಾಕ್ಡೌನ್ ಸ್ಥಿತಿಯಿಂದಾಗಿ ಕೆಲಸಕ್ಕೆ ಹೋಗಲಾಗದೆ ವಲಸೆ ಕುಟುಂಬಗಳು ಊಟ, ವಸತಿಯಿಲ್ಲದೆ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಶಾಸಕ ಉದಾಸಿ ಅವರ ಪರವಾಗಿ ಮುಖಂಡರು ಅಕ್ಕಿ, ಬೇಳೆ, ಗೋಧಿ, ಅಡುಗೆ ಎಣ್ಣೆ, ಕೊಬ್ಬರಿ ಎಣ್ಣೆ, ಸೋಪ್ ಮತ್ತು ಸಾಂಬಾರ ಪದಾರ್ಥ ವಿತರಿಸಿದರು.
2 ತಿಂಗಳ ಹಿಂದೆಯೇ ಶಿರಸಿ ಮಾರಿಕಾಂಬಾ ಜಾತ್ರೆಗೆ ಬಿಹಾರ ಮೂಲದ 11 ಜನ ಆಟಿಕೆ ಸಾಮಗ್ರಿಗಳ ತಯಾರಕರು ಆಗಮಿಸಿದ್ದರು. ಮಾ. 16ರಿಂದ ಹಾನಗಲ್ಲಿನಲ್ಲಿ ನಡೆಯಲಿದ್ದ ತಾರಕೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಆಟಿಕೆ ಸಾಮಾನು ಮಾರಾಟ ಮಾಡುವುದಕ್ಕಾಗಿ ಬಂದಿದ್ದ 11 ಜನರು ಲಾಕ್ಡೌನ್ ಘೊಷಣೆಯಾಗಿ ಇಲ್ಲಿಯೇ ಉಳಿಯುವಂತಾಯಿತು. ಇವರಲ್ಲಿರುವ ಹಣ ಖಾಲಿಯಾಗಿ ಉಪವಾಸ ಇರುವಂತಾಗಿತ್ತು. ಹೀಗಾಗಿ ತಾಲೂಕು ಆಡಳಿತ ಊಟದ ವ್ಯವಸ್ಥೆ ಕೈಗೊಂಡಿತ್ತು. ಇದರ ನಡುವೆ ಶಾಸಕ ಉದಾಸಿ ಮಾನವೀಯ ನೆಲೆಯಲ್ಲಿ ಮಂಗಳವಾರ ಪಡಿತರ ಒದಗಿಸಿದ್ದಾರೆ. ಲಾಕ್ಡೌನ್ ಮುಗಿಯುವವರೆಗೂ ಪಡಿತರ ವವಸ್ಥೆ ಮುಂದುವರಿಸುವುದಾಗಿ ಅವರುತಿಳಿಸಿದ್ದಾರೆ.
ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಬಿಜೆಪಿ ತಾಲೂಕಾಧ್ಯಕ್ಷ ರಾಜು ಗೌಳಿ, ತಾ.ಪಂ. ಸದಸ್ಯ ಬಸವರಾಜ ಬೂದಿಹಾಳ, ಮುಖಂಡರಾದ ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ್, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಸಂತೋಷ ಟೀಕೋಜಿ, ಮಂಜುನಾಥ ಬಸವಂತಕರ, ಸಂತೋಷ ಭಜಂತ್ರಿ, ಭಾಸ್ಕರ್ ಹುಲಮನಿ, ಕೋಟೆಪ್ಪ ಚಿಕ್ಕಣ್ಣನವರ, ಯಲ್ಲಪ್ಪ ಶೇರಖಾನಿ, ಪಂಚಾಕ್ಷರಗೌಡ ಪಾಟೀಲ, ಹಸೀನಾಬಿ ನಾಯ್ಕನವರ, ರವಿರಾಜ ಕಲಾಲ ಇದ್ದರು.
ಹೊರಜಿಲ್ಲೆಗಳಿಂದ ಆಗಮಿಸುವ ವಾಹನಗಳ ತಪಾಸಣೆಗಾಗಿ ತಾಲೂಕಿನ ಸಮ್ಮಸಗಿ, ಕೊಪ್ಪರಸಿಕೊಪ್ಪ, ಗೊಂದಿ ಹಾಗೂ ಹಳ್ಳಿಬೈಲ್ನಲ್ಲಿ ಸ್ಥಾಪಿಸಿರುವ ಚೆಕ್ಪೋಸ್ಟ್ಗಳನ್ನು ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಮಂಗಳವಾರ ಪರಿಶೀಲಿಸಿದರು. ಹೊರಗಡೆಯಿಂದ ಬರುವ ವಾಹನಗಳನ್ನು ಕಡ್ಡಾಯವಾಗಿ ತಡೆದು ಇಲ್ಲಿಗೆ ಆಗಮಿಸುತ್ತಿರುವ ಕಾರಣ ಪರಿಶೀಲಿಸಿ ತಾಲೂಕು ಆಡಳಿತದ ಗಮನಕ್ಕೆ ತರುವಂತೆ ಚೆಕ್ಪೋಸ್ಟ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಂತರ ಹಾನಗಲ್ಲಿನ ನಿರಾಶ್ರಿತರ ವಸತಿ ಸ್ಥಳಗಳಿಗೂ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಅಲ್ಲಿನ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.