150 ಸೀಟ್ ಗೆಲ್ಲೋದು ನಿಶ್ಚಿತ

bkt-25-6
ವಿ‌.ಪ ಸದಸ್ಯ ಛಲವಾದಿ ನಾರಾಯಣಸ್ವಾಮಿ
Published on

ಬಾಗಲಕೋಟೆ:ರಾಜ್ಯದಲ್ಲಿ ದಲಿತ ಸಮುದಾಯವು ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದೆ. ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ , ವಿ‌.ಪ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ವಿಧಾನಸಭಾ ಮತಕ್ಷೇತ್ರದಲ್ಲಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಪ್ರೋತ್ಸಾಹ, ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ನಿರೀಕ್ಷೆಗೆ ಪುಷ್ಠಿ ನೀಡುತ್ತಿದೆ ಎಂದರು.
70 ವರ್ಷದಲ್ಲಿ ಕಾಂಗ್ರೆಸ್ ದಲಿತರನ್ನು ಒಡೆದಾಳುವ ನೀತಿ ಮಾಡಿತು. ಸಿದ್ದರಾಮಯ್ಯ ವೀರಶೈವ ಲಿಂಗಾಯತ ಧರ್ಮವನ್ನು ಒಡೆದರು. ಇದೀಗ ಒಕ್ಕಲಿಗರು, ಮುಸ್ಲಿಂರನ್ನು ಎತ್ತಿ ಕಟ್ಟಲಾಗುತ್ತಿದೆ. ಅದಕ್ಕೆ ಮುಸ್ಲಿಂ ನಾಯಕರು ಕಾಂಗ್ರೆಸ್ ಬಿಟ್ಟು ಹೊರಗೆ ಬರುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮನ್ನು ತಾವೇ ರಾಜ್ಯಮಟ್ಟದ ನಾಯಕ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತರು. ಕಳ್ಳ ಹಸು ತಪ್ಪಿಸಿಕೊಂಡು ಬಂದ ಹಾಗೇ ಬಾದಾಮಿಗೆ ಬಂದು ಅಲ್ಪಮತಗಳಿಂದ ಗೆದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವುದೇ ಕ್ಷೇತ್ರಕ್ಕೆ ನಿಂತರು ಬಿಡುವದಿಲ್ಲ. ಸಿದ್ದರಾಮೋತ್ಸವ ಅಲ್ಲ. ಸಿದ್ದರಾಮಯ್ಯ ಅಂತ್ಯೋತ್ಸವ ಅಂತ ಟೀಕಿಸಿದರು.
ಕಾಂಗ್ರೆಸ್‌ನಲ್ಲಿ
ಮುಖ್ಯಮಂತ್ರಿ ಸೀಟ್ ಗೆ ಡಜನ್‌ಗಟ್ಟಲೆ ಜನ ಸರದಿಯಲ್ಲಿ ನಿಂತಿದ್ದಾರೆ. ಅಲ್ಲಿನ ನಾಯಕರಿಗೆ ಒಬ್ಬರಿಗೊಬ್ಬರು ನಂಬಿಕೆ ಇಲ್ಲ. ಅಪನಂಬಿಕೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅದಕ್ಕೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಬಲಪಡಿಸಲಾಗುತ್ತಿದೆ. ಅತಂತ್ರ ಸರ್ಕಾರ ಅಲ್ಲ. ಸ್ವತಂತ್ರ ಸರ್ಕಾರ ಬರಬೇಕು ಎನ್ನುವ ಕಾರಣಕ್ಕೆ 150 ಸೀಟ್ ಗೆಲ್ಲುವ ಗುರಿ ಹೊಂದಲಾಗಿದೆ ಎಂದರು.
ಕಾಂಗ್ರೆಸ್, ಜಿಡಿಎಸ್ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿದೆ. ಕಾಂಗ್ರೆಸ್‌ಗೆ ಗಾಂಧಿ ಕುಟುಂಬದವರು ಬಿಟ್ಟರೆ ಬೇರೆಯವರು ಅಧ್ಯಕ್ಷರಾಗಲ್ಲ. ಜಿಡಿಎಸ್ ಗೆ ಅದೇ ಗತಿ. ಬಿಜೆಪಿಯಲ್ಲಿ ಇನ್ನು ಮುಂದೆ ಕುಟುಂಬ ರಾಜಕಾರಣ ಮಾಡುವದಿಲ್ಲ. ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದರು. ಬಿಜೆಪಿ ಅಂದ್ರೇ ಬಿಎಸ್ ವೈ. ಹೀಗಾಗಿ ಅವರ ಕುಟುಂಬಕ್ಕೆ ಗೌರವ ಪಕ್ಷದಲ್ಲಿ ಇದೆ. ಅವರ ಕುಟುಂಬಕ್ಕೆ ಟಿಕೆಟ್ ನೀಡುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಜಿಲ್ಲಾ ಪಂಚಾಯಿತಿ, ತಾಲೂಕಾ ಪಂಚಾಯಿತಿ ಚುನಾವಣೆ ಸರ್ಕಾರ ಬೇಕು ಅಂತ ತಡೆದಿಲ್ಲ. ಮೀಸಲಾತಿ ವಿಚಾರ ಕೋರ್ಟನಲ್ಲಿ ಇದೆ. ಹೀಗಾಗಿ ಚುನಾವಣೆ ತಡವಾಗಿದೆ ಎಂದು ಹೇಳಿದರು.
ಶಾಸಕ ಎನ್.ಮಹೇಶ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಮುಖಂಡರಾದ ಈಶಪ್ಪ ಹಿರೇಮನಿ, ಪ್ರಕಾಶ ಕಾಳೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net