

ರಾಣೆಬೆನ್ನೂರ: ನಗರದ ಹೋಟೆಲ್, ಬೇಕರಿ, ಪಾನ್ಶಾಪ್ ಸೇರಿ ವಿವಿಧ ಅಂಗಡಿಗಳಿಗೆ ತಹಸೀಲ್ದಾರ್ ಬಸವನಗೌಡ ಕೋಟೂರು ಹಾಗೂ ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ನೇತೃತ್ವದ ತಂಡ ಶುಕ್ರವಾರ ದಾಳಿ ನಡೆಸಿ ಪರಿಶೀಲಿಸಿತು.
ಬಸ್ ನಿಲ್ದಾಣ, ಕೋರ್ಟ್ ವೃತ್ತ ಹಾಗೂ ಪಿ.ಬಿ. ರಸ್ತೆ ಹೋಟೆಲ್, ಬೇಕರಿ, ಕಿರಾಣಿ ಹಾಗೂ ಬೀಡಾ ಅಂಗಡಿಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಫುಡ್ ಲೈಸನ್ಸ್, ಟ್ರೇಡ್ ಲೈಸನ್ಸ್, ಪ್ಲಾಸ್ಟಿಕ್ ಬಳಕೆ, ಆಹಾರ ಪದಾರ್ಥಗಳ ಗುಣಮಟ್ಟ, ತಯಾರಿಕೆ ಸ್ಥಳದಲ್ಲಿ ಕೈಗೊಳ್ಳಬೇಕಾದ ಸ್ವಚ್ಛತಾ ಕ್ರಮಗಳ ಕುರಿತು ಪರಿಶೀಲಿಸಿದರು.
ಸ್ವಚ್ಛತೆ ಕಾಪಾಡಿಕೊಳ್ಳದ 15 ಮಳಿಗೆಯವರಿಗೆ ನೋಟಿಸ್ ಜಾರಿ ಮಾಡಿ, 15 ದಿನದೊಳಗೆ ನ್ಯೂನತೆ ಸರಿಪಡಿಸಿಕೊಳ್ಳದಿದ್ದರೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 25 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ವಶಪಡಿಸಿಕೊಂಡರು. ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘಿಸಿದ ಹಾಗೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಮಳಿಗೆಯವರಿಂದ 4 ಸಾವಿರ ರೂ. ದಂಡ ವಸೂಲಿ ಮಾಡಿದರು.
ನಗರಸಭೆ ಪರಿಸರ ಇಂಜಿನಿಯರ್ ಮಂಜುಳಾದೇವಿ ಮುಂಡಾಸದ, ಆರೋಗ್ಯ ನಿರೀಕ್ಷಕ ಜಗದೀಶ ವೈ.ಕೆ., ಆರೋಗ್ಯ ಇಲಾಖೆಯ ಡಾ. ಸಂತೋಷ ದಡ್ಡಿ, ಎಸ್.ಸಿ. ಕೋರಿ, ಸ್ಟೀವನ್ ಅಗಡಿ, ಮಧುರಾಜ ಕಂಬಳಿ, ರಾಘವೇಂದ್ರ ಗಾವಡೆ, ಎಚ್.ಎಸ್. ಶಿವಪ್ಪಳವರ ಹಾಗೂ ಕಂದಾಯ, ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.