15 ದಿನಕ್ಕೊಮ್ಮೆ ಗ್ರಾಪಂಗಳಿಗೆ ರ‌್ಯಾಂಕಿಂಗ್

Published on

ಚನ್ನರಾಯಪಟ್ಟಣ: ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ವ್ಯವಸ್ಥೆ ಚುರುಕುಗೊಳಿಸುವ ನಿಟ್ಟಿನಲ್ಲಿ ಪ್ರತಿ 15 ದಿನಗಳಿಗೊಮ್ಮೆ ಆಯಾ ಪಂಚಾಯಿತಿ ಅಭಿವೃದ್ಧಿ ಆಧರಿಸಿ ರ‌್ಯಾಂಕಿಂಗ್ ನೀಡುವ ಪದ್ಧತಿಯನ್ನು ಜಾರಿಗೊಳಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್ ತಿಳಿಸಿದರು.


ಪಂಚಾಯಿತಿಯಲ್ಲಿನ ಅಭಿವೃದ್ಧಿ ಸಲುವಾಗಿ 100 ಅಂಕಗಳನ್ನು ನಿಗದಿಗೊಳಿಸಿ ಆಯಾ ಪಂಚಾಯಿತಿಗಳು ಪಡೆಯುವ ಅಂಕಗಳಿಗೆ ಅನುಗುಣವಾಗಿ ರ‌್ಯಾಂಕಿಂಗ್ ನೀಡುವ ವ್ಯವಸ್ಥೆ ಜಾರಿ ಮಾಡಲಾಗಿದೆ. ನರೇಗಾ-15 ಅಂಕ, ಸಕಾಲ ಅರ್ಜಿ ವಿಲೇವಾರಿಗೆ 10, ವಸತಿ ಯೋಜನೆಗೆ 15, ಇ.ಹಾಜರಾತಿ-5 , 15ನೇ ಹಣಕಾಸು 10, ಸ್ವಚ್ಛ ಭಾರತ್‌ಗೆ 15, ಕರವಸೂಲಿಗೆ 20 ಅಂಕ ನಿಗದಿಪಡಿಸಲಾಗಿದೆ. ಪ್ರತಿ ವಲಯದಲ್ಲಿ ಸಾಧಿಸಿರುವ ಗುರಿಯನ್ನಾಧರಿಸಿ ರ‌್ಯಾಂಕ್ ನೀಡಿ, ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಎಲ್ಲ ಪಿಡಿಒಗಳು ತಮ್ಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಗೆ ಸಿಗುವ ಸಲುವಾಗಿ ಬೆಳಗ್ಗೆ 10.15ಕ್ಕೆ ಮತ್ತು ಸಂಜೆ 4 ಗಂಟೆ ಇ-ಹಾಜರಾತಿ ಕಡ್ಡಾಯಗೊಳಸಲಾಗಿದೆ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಆ.10ರವರೆಗೆ ನೀಡಲಾದ ಅವಧಿಯಲ್ಲಿ ಸಂತೆಶಿವರ 55 ಅಂಕ ಪಡೆದು ಮೊದಲ ರ‌್ಯಾಂಕ್‌ಗಳಿಸಿದೆ. ತಗಡೂರು, ಗೌಡಗೆರೆ, ಬೆಕ್ಕ, ಬಾಗೂರು, ನಂತರದ ಸ್ಥಾನದಲ್ಲಿದ್ದರೆ, 36 ಅಂಕಗಳೊಂದಿಗೆ ಬಾಳಗಂಚಿ ಕೊನೆಯ ಸ್ಥಾನದಲ್ಲಿದೆ ಎಂದರು.


15.74 ಕೋಟಿ ರೂ. ತೆರಿಗೆ ಬಾಲಿ:
ತಾಲೂಕಿನ 41 ಪಂಚಾಯಿತಿಗಳಿಂದ ಕಂದಾಯ ಬಾಕಿ ದೊಡ್ಡ ಮಟ್ಟದಲ್ಲಿದ್ದು, 16.21 ಕೋಟಿ ರೂ.ಬಾಕಿ ಪೈಕಿ 47 ಲಕ್ಷ ವಸೂಲಾಗಿದೆ. ಉಳಿದ 15.74 ಕೋಟಿ ರೂ.ವಸೂಲಿಗೆ ಕ್ರಮವಹಿಸಲಾಗಿದೆ. ಆಯಾ ಪಂಚಾಯಿತಿ ಬಿಲ್ ಕಲೆಕ್ಟರ್‌ಗೆ ದಿನವೊಂದಕ್ಕೆ ಇಂತಿಷ್ಟು ವಸೂಲಿಯಾಗಬೇಕು, ಇಲ್ಲದಿದ್ದಲ್ಲಿ ಪಂಚಾಯಿತಿಗೆ ಬರುವಂತಿಲ್ಲ ಎಂದು ತಾಕೀತು ಮಾಡಲಾಗಿದೆ. ಪ್ರತಿ ವಾರಕೊಮ್ಮೆ ಪಿಡಿಒಗಳು ಕರವಸೂಲಿಗಾರನೊಂದಿಗೆ ಹಳ್ಳಿಗಳಿಗೆ ತೆರಳಬೇಕು. ಅವಶ್ಯಕತೆಯಿದ್ದರೆ ಕರವಸೂಲಿ ತಂಡದೊಂದಿಗೆ ನಾನು ಭೇಟಿ ನೀಡುತ್ತೇನೆ ಎಂದರು ತಿಳಿಸಿದರು.


ಮನೆಗಳಿಗೆ ಇ-ಸ್ವತ್ತು:
ನರೇಗಾ ಯೋಜನೆಯಲ್ಲಿ ತಾಲೂಕು, ಜಿಲ್ಲೆಯಲ್ಲೇ ಅತ್ಯುತ್ತಮ ಸಾಧನೆ ಮಾಡಿದೆ. 2019-20ನೇ ಸಾಲಿನಲ್ಲಿ 10.5 ಲಕ್ಷ, 20-21ನೇ ಸಾಲಿನಲ್ಲಿ 13 ಲಕ್ಷ, 21-22ನೇ ಸಾಲಿನಲ್ಲಿ 14 ಲಕ್ಷ ಮಾನವ ದಿನಗಳನ್ನು ಸೃಜಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿಗೆ 10.15ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ ಆ ಗುರಿಯನ್ನು ಪೂರ್ಣಗೊಳಿಸಲಾಗುವುದು. ಶಾಸಕರ ಗಮನಕ್ಕೆ ತಂದು ತಾಲೂಕಿನ ಜನಿವಾರ ಮತ್ತು ದಿಡಗ ಪಂಚಾಯಿತಿಯ ಒಂದೊಂದು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಗ್ರಾಮದಲ್ಲಿನ ಎಲ್ಲ ಮನೆಗಳಿಗೆ ಇ-ಸ್ವತ್ತು ಮಾಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ತಾಪಂ ಸಹಾಯಕ ನಿರ್ದೇಶಕ ಗಿರೀಶ್, ಸಹಾಯಕ ಲೆಕ್ಕಾಧಿಕಾರಿ ಬಿ.ಹರೀಶ್, ವ್ಯವಸ್ಥಾಪಕ ಮಂಜಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net