

ರಾಣೆಬೆನ್ನೂರ: ತಾಲೂಕಿನ ಚಿಕ್ಕಹರಳಹಳ್ಳಿ ಪ್ಲಾಟ್ ನಿವಾಸಿಗಳು ಕಳೆದ 15 ವರ್ಷದಿಂದ ವಿದ್ಯುತ್ ಸಮಸ್ಯೆ ಬಗೆಹರಿಸಿಕೊಳ್ಳಲು ನಿರಂತರ ಹೋರಾಟ ನಡೆಸಿದ್ದಾರೆ. ಆದರೆ, ಈವರೆಗೂ ಅವರ ಸಮಸ್ಯೆಗೆ ಪರಿಹಾರ ದೊರೆತಿಲ್ಲ.
ಚಿಕ್ಕಹರಳಹಳ್ಳಿ ಪ್ಲಾಟ್ನಲ್ಲಿ 25ಕ್ಕೂ ಅಧಿಕ ಮನೆಗಳಿವೆ. ಸರ್ಕಾರದಿಂದ ವಿವಿಧ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ವಿುಸಿಕೊಡಲಾಗಿದ್ದರೂ, ಪ್ರಮುಖವಾಗಿ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ. ಹೀಗಾಗಿ ಕಳೆದ 15 ವರ್ಷಗಳಿಂದಲೂ ಇಲ್ಲಿನ ನಿವಾಸಿಗಳು ಕತ್ತಲಲ್ಲಿಯೇ ಕಾಲ ಕಳೆಯುವಂತಾಗಿದೆ.
ಈ ಭಾಗದಲ್ಲಿ ವಿದ್ಯುತ್ ಕಂಬ ಅಳವಡಿಸುವ ಕುರಿತು ಹೆಸ್ಕಾಂ ಕಚೇರಿಗೆ ಅಲೆದಾಡಿ ಸುಸ್ತಾಗಿರುವ ಜನತೆ, ಸದ್ಯ ಪ್ಲಾಟ್ನ ಬಳಿ ಹಾಯ್ದು ಹೋಗಿರುವ ವಿದ್ಯುತ್ ಲೈನ್ ಮೂಲಕ ತಾತ್ಕಾಲಿಕವಾಗಿ ವಿದ್ಯುತ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ವಿದ್ಯುತ್ ತಂತಿಯನ್ನು 200ರಿಂದ 300 ಮೀಟರ್ ದೂರದಿಂದ ಅಲ್ಲಲ್ಲಿ ಕಟ್ಟಿಗೆ ಕಂಬಗಳನ್ನು ನಿಲ್ಲಿಸಿ ಸಂಪರ್ಕ ಪಡೆದುಕೊಂಡಿದ್ದಾರೆ. ಮಳೆಗಾಲದಲ್ಲಿ ಕಂಬಗಳು ಗಾಳಿ ಮಳೆಗೆ ಬೀಳತೊಡಗಿವೆ. ಹೀಗಾಗಿ ಆಗಾಗ ವಿದ್ಯುತ್ ಕೈಕೊಡುತ್ತದೆ.
ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಚಿಕ್ಕಹರಳಹಳ್ಳಿಯಲ್ಲಿರುವ ಇತರರ ಮನೆಗಳಿಗೆ ತೆರಳಿ ಅಧ್ಯಯನ ಮಾಡುವ ಪರಿಸ್ಥಿತಿ ನಿರ್ವಣವಾಗಿದೆ. ಕಳೆದ ವರ್ಷ ಕತ್ತಲಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟ ಘಟನೆಯೂ ನಡೆದಿದೆ.
ಸಮಸ್ಯೆ ಬಗೆಹರಿಸುವ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ, ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ಲಾಟ್ನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಕಳೆದ 15 ವರ್ಷದಿಂದ ವಿದ್ಯುತ್ ಕಂಬ ಅಳವಡಿಸುವಂತೆ ಹೆಸ್ಕಾಂ ಕಚೇರಿ, ಶಾಸಕರ ಮನೆಗೆ ಅಲೆದಾಡಿ ಸುಸ್ತಾಗಿ ಹೋಗಿದ್ದೇವೆ. ಆದರೆ, ಈವತ್ತಿಗೂ ನಮ್ಮ ಬಗ್ಗೆ ಯಾರೂ ಕರುಣೆ ತೋರಿಸಿಲ್ಲ. ಮುಂದೆಯೂ ಮಾಡದೆ ಹೋದರೆ, ಅನಿವಾರ್ಯವಾಗಿ ಎಲ್ಲರೂ ಹೋಗಿ ಹೆಸ್ಕಾಂ ಕಚೇರಿ ಎದುರು ಧರಣಿ ಕುಳಿತುಕೊಳ್ಳುತ್ತೇವೆ. | ಫಕೀರಪ್ಪ ಕೆ., ಚಿಕ್ಕಹರಳಹಳ್ಳಿ ಪ್ಲಾಟ್ ನಿವಾಸಿ ಚಿಕ್ಕಹರಳಹಳ್ಳಿ ಪ್ಲಾಟ್ಗೆ ಕಂಬಗಳನ್ನು ಅಳವಡಿಸಿ ವಿದ್ಯುತ್ ಲೈನ್ ನೀಡುವ ಸಲುವಾಗಿ ಎಸ್ಇಟಿಪಿ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುಮೋದನೆ ದೊರೆತ ಕೂಡಲೆ ಟೆಂಡರ್ ಕರೆದು ಕಾಮಗಾರಿ ಮಾಡಲಾಗುವುದು. | ಗಿರೀಶ ನಾಯ್ಕ, ಹೆಸ್ಕಾಂ ಎಇಇ ರಾಣೆಬೆನ್ನೂರ