

ವಿಜಯಪುರ: ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ 15-20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ಖಂಡಿತ ನಿಜ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಸಮಾಧಾನ ಇದ್ದಂತಿದೆ. ಹೀಗಾಗಿ ಅವರಾಗಿಯೇ ಬಿಜೆಪಿಗೆ ಬರಲು ತಯಾರಾಗಿದ್ದಾರೆ. ಆದರೆ, ಸದ್ಯಕ್ಕೆ ನಮಗೆ ಆ ಅವಶ್ಯಕತೆ ಇಲ್ಲ ಎಂದು ಗುರುವಾರ ರಾಣಿ ಚನ್ನಮ್ಮ ಸಭಾಭವನದಲ್ಲಿ ನಡೆದ ರಾಜ್ಯ ಮಟ್ಟದ ಪ್ರಕೋಷ್ಟಗಳ ಸಭೆ ಬಳಿಕ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಿಪಡಿಸಿದ ಕಟೀಲ, ದೊಡ್ಡವರ ಬಾಯಲ್ಲಿ ಸಣ್ಣತನದ ಮಾತು ಬರಬಾರದರು ಎಂದರು.
ರಾಮ ಮಂದಿರ ಕಟ್ಟಲು ಸುಪ್ರೀಂ ಕೋರ್ಟ್ ಆದೇಶವೇ ಇದೆ. ಹೀಗಾಗಿ ರಾಮಮಂದಿರ ಬಗ್ಗೆ ಮಾತನಾಡುವುದು ಸುಪ್ರೀಂ ಕೋರ್ಟ್ ಮತ್ತು ಸಂವಿಧಾನಕ್ಕೆ ತೋರುವ ಅಗೌರವವಾಗುತ್ತದೆ ಎಂದರು.
ಯತ್ನಾಳ ನೋಟಿಸ್ ವಿಚಾರ: ಸಿಎಂ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡುತ್ತಿರುವ ಬಗ್ಗೆ ಪಕ್ಷ ಗಮನಿಸುತ್ತಿದೆ. ಶಿಸ್ತು ಸಮಿತಿ ನೋಟಿಸ್ ನೀಡಿದೆ. ಅದು ಮುಟ್ಟಿದ ಬಳಿಕ ಅವರು ಉತ್ತರ ಕೊಡಲಿ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಅನ್ಯಾಯ ಆಗಿಲ್ಲ. ಇನ್ನು ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಆಗಿದ್ದು ಅವರ ಕಾರ್ಯದ ಮೇಲೆ. ಪಕ್ಷಕ್ಕಾಗಿ ಅವರು ಕೆಲಸ ಮಾಡಿದ್ದಾರೆ. ಅದನ್ನು ಆಧರಿಸಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಅಧಿಕಾರಿ ನೋಡಿ ಅಲ್ಲ. ರಾಜ್ಯ ಉಪಾಧ್ಯಕ್ಷನಾಗಿ ವಿಜಯೇಂದ್ರ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆಂದು ಯತ್ನಾಳಗೆ ಟಾಂಗ್ ನೀಡಿದರು.
ಮೀಸಲಾತಿ ವಿಚಾರ: ಮೀಸಲಾತಿಗಳ ಹೋರಾಟದಲ್ಲಿ ಬಿಜೆಪಿ ಸಚಿವರು, ಶಾಸಕರು ಭಾಗಿ ಆಗಬಾರದೆಂದು ಯಾವುದೇ ಸೂಚನೆ ಇಲ್ಲ. ಎಲ್ಲರನ್ನು ಕರೆದು ಮಾತನಾಡಿ ಅಂತಾ ಸಿಎಂ ಹೇಳಿಕೆ ಕೊಟ್ಟಿದ್ದಾರೆ. ಎಲ್ಲ ಸಮುದಾಯಗಳಿಗೆ ಪ್ರಾಮುಖ್ಯತೆ ಕೊಡುವುದು ಪ್ರಜಾಪ್ರಭುತ್ವದ ಕರ್ತವ್ಯ. ನಮ್ಮ ಕಲ್ಪನೆಯೂ ಅದೇ ಆಗಿದೆ. ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡುವುದು, ಗೌರವ ಕೊಡುವುದು. ಇದರ ಬಗ್ಗೆ ಸರ್ಕಾರ, ಪಕ್ಷ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳುತ್ತೇವೆ ಎಂದರು.
ಯತ್ನಾಳ ಗೈರು: ನಾಲ್ಕು ವಿಭಾಗಗಳ 16 ಜಿಲ್ಲೆಗಳ ರಾಜ್ಯ ಪ್ರಕೋಷ್ಟಕಗಳ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಗೈರಾಗಿದ್ದು ಕಂಡು ಬಂತು.