ಬಿಜೆಪಿ ರಾಜ್ಯ ಪ್ರಕೋಷ್ಠಕಗಳ ಸಭೆಗೆ ನಳೀನ ಕುಮಾರ ಕಟೀಲ ಚಾಲನೆ

20210217_112052
Published on

ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಕೋಷ್ಠಕಗಳ ಸಭೆ ಬುಧವಾರ ಅದ್ದೂರಿಯಾಗಿ ನೆರವೇರಿತು‌.

ಇಲ್ಲಿನ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಂಡ

ಸಭೆಯಲ್ಲಿ ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ ವಿಭಾಗದ 16 ಜಿಲ್ಲೆಯ ಸುಮಾರು ಆರುನೂರಕ್ಕೂ ಅಧಿಕ

ಜನ ಭಾಗವಹಿಸಿದ್ದರು.

ಉದ್ಘಾಟನೆ ನೆರವೇರಿಸಿದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಮಾತನಾಡಿ, ರಾಜ್ಯದ 24 ಜಿಲ್ಲೆಯಲ್ಲಿ ಪ್ರಕೋಷ್ಠಕಗಳು ರಚಿಸಲಾಗಿದೆ. ಪ್ರಕೋಷ್ಠಕಗಳ ಮುಂದಿನ ಗುರಿ ಮತ್ತು ಉದ್ದೇಶ ತಿಳಿಸುವ ಸದುದ್ದೇಶದೊಂದಿಗೆ ಸಭೆ ಆಯೋಜಿಸಿದ್ದಾಗಿ ತಿಳಿಸಿದರು.

ಬಿಜೆಪಿ ವಟವೃಕ್ಷದಂತೆ ಬೆಳೆದಿದೆ. ಈ ವೃಕ್ಷಕ್ಕಡ ರೆಂಬೆ ಕೊಂಬೆಗಳೇ

ಅಲಂಕಾರ. ಬಿಜೆಪಿ ವೃಕ್ಷ ಬಲಿಷ್ಟವಾಗಿ ಬೆಳೆಯಲು ಪ್ರಕೋಷ್ಟಕಗಳೆಂಬ ರೆಂಬೆ ಕೊಂಬೆ ಬಲಿಷ್ಟವಾಗಬೇಕು. ಆ ಕಾರ್ಯ ಇದಾಗಿದೆ ಎಂದರು.

ಯುವ ಸಮುದಾಯದಲ್ಲಿ ಇಂದು ಬಿಜೆಪಿ ಬಗ್ಗೆ ಒಲವಿದೆ.

ರಾಜಕಾರಣದಿಂದಲೇ ಪರಿವರ್ತನೆ ಸಾಧ್ಯ ಎಂಬ ಭಾವ ಯುವಕರಲ್ಲಿ ಬೆಳೆದಿದೆ. ಅದೇ ಕಾರಣಕ್ಕೆ ಬಿಜೆಪಿ

12 ಕೋಟಿ ಸದಸ್ಯತ್ವ ಪಡೆದ ಬೃಹತ್

ಪಾರ್ಟಿ ಆಗಿ ಹೊರಹೊಮ್ಮಿದೆ ಎಂದರು.

ಹೊಸ ಹೊಸ ವ್ಯಕ್ತಿಗಳನ್ನು ಪಕ್ಷಕ್ಕೆ

ತಂದು ಪಕ್ಷ ಬಲಪಡಿಸುವ ಜವಾಬ್ದಾರಿ ಪ್ರಕೋಷ್ಠಕಗಳ ಮೇಲಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ

ಪ್ರಕೋಷ್ಠಕಗಳು ಬಲಿಷ್ಟವಾಗಿ ಬೆಳೆಯಬೇಕಿದೆ ಎಂದರು.

ಯಾರನ್ನೋ ಸಿಎಂ ಮಾಡುವುದು,

ಪಿಎಂ ಮಾಡುವುದು ಬಿಜೆಪಿ ಜವಾಬ್ದಾರಿ ಅಲ್ಲ. ಭಾರತವನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯುವುದೇ ಬಿಜೆಪಿ ಜವಾಬ್ದಾರಿ ಎಂದರು.

ದೀನ್ ದಯಾಳ ಉಪಾಧ್ಯಾಯರು ಅಂತ್ಯೋದಯದ ಕಲ್ಪನೆ ಕೊಟ್ಟರು. ಈ ದೇಶದ ಕಟ್ಟಕಡೆಯ ವ್ಯಕ್ತಿಯೂ ಸ್ವಾಭಿಮಾನಿ ಆಗಬೇಕೆಂಬುದು ಅವರ ಆಶಯ ಆಗಿತ್ತು. ಅದಕ್ಕಾಗಿ ಅಧಿಕಾರವೇ ನಮ್ಮ ಪಕ್ಷದ ಗುರಿ ಅಲ್ಲ ಎಂದರು.

ಕಳೆದ ವರ್ಷ ಕರೊನಾ ಬಂದಾಗ

ಅಂತ್ಯೋದಯ ಕಲ್ಪನೆ ಪ್ರಧಾನಿ ಬಿಚ್ಚಿಟ್ಟರು. ಸುಮಾರು

1.50 ಕೋಟಿ ಜನರಿಗೆ ಅಗತ್ಯ ವಸ್ತುಗಳು 60 ಕೋಟಿ ಕುಟುಂಬಗಳಿಗೆ ಆಹಾರ, 10 ಕೋಟಿ ಜನರಿಗೆ ಔಷಧ ನೀಡುವ ನಿಟ್ಟಿನಲ್ಲಿ ಪಕ್ಷ ಕಾರ್ಯ ನಿರ್ವಹಿಸಿದೆ ಎಂದರು.

ಬಿಜೆಪಿಯ ಹಿರಿಯ ರಾಜಕಾರಣಿಗಳ ನಡುವಳಿಕೆಗಳು ದೇಶದಲ್ಲಿ ಪರಿವರ್ತನೆ ತಂದಿವೆ‌. ವಾಜಪೇಯಿ ಅವರ ನಡುವಳಿಕೆಯನ್ನು ವಿರೋಧ ಪಕ್ಷಗಳು ಸಹ ಕೊಂಡಾಡಿದವು. ಇದೀಗ ನರೇಂದ್ರ ಮೋದಿ ಅವರ ನಡುವಳಿಕೆ ರಾಷ್ಟ್ರದ ಲ್ಲಿ ಅನೇಕ ಪರಿವರ್ತನೆ ತಂದಿವೆ ಎಂದರು.

ಈ ದೇಶದಲ್ಲಿ ಪರಿವರ್ತನೆ ಯುವ ಆರಂಭವಾಗಿದ್ದೇ ಅಟಲ್ ಬಿಹಾರಿ ವಾಜಪೇಯಿ ಅವರಿಂದ.‌ ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಡವರು ವಾಜಪೇಯಿ‌ ಎಂದರು.

ಈ ಹಿಂದಿನ ಸರ್ಕಾರಗಳು ನೀರು, ಮಣ್ಣು, ಆಕಾಶದಲ್ಲಿ ಭ್ರಷ್ಟಾಚಾರ ಮಾಡಿದ್ದವು. ಕಲ್ಲಿದ್ದಲು ಹಗರಣ ಮಾಡಿದವು. ಅಧಿಕಾರದಲ್ಲಿ ದ್ದಾಗ ಭ್ರಷ್ಟಾಚಾರ, ಅಧಿಕಾರ ಇಲ್ಲದಿದ್ದಾಗ ಕುಟುಂಬ ರಾಜಕಾರಣ ಮಾಡುವುದು ಕಾಂಗ್ರೆಸ್ ಜಾಯಮಾನ ಎಂದರು.

ತುರ್ತು ಪರಿಸ್ಥಿರಿ ಹೇರಿ ರಾಷ್ಟ್ರ ಭಕ್ತರನ್ನು ಜೈಲಿಗೆ ತಳ್ಳಿದ್ದು ಕಾಂಗ್ರೆಸ್. ಕಾಶ್ಮೀರದಲ್ಲಿ ಪಂಡಿತರ ಕೊಲೆಯಾದಾಗ, ಕಾರ್ಕಳದಲ್ಲಿ ಪಂಡಿತರ ಹತ್ಯೆಯಾದಾಗ ಕಾಂಗ್ರೆಸ್ ಗೆ ಕಣ್ಣೀರು ಬರಲಿಲ್ಲ. ಅತೀ ಹೆಚ್ಚು ಸಿಖ್ಖರ ಕಗ್ಗೊಲೆ ಮಾಡಿದ್ದು ಕಾಂಗ್ರೆಸ್. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು ಕಾಂಗ್ರೆಸ್ ಎಂದರು.

ದೇಶದಲ್ಲೀಗ ಪರಿವರ್ತನೆ ಯುವ ಆರಂಭವಾಗಿದೆ. ಮನಮೋಹನಸಿಂಗ್ ಅವಧಿಯಲ್ಲಿ ಪಾಕಿಸ್ತಾನ ಸೈನಿಕರ ರುಂಡ ಚೆಂಡಾಡಿತು‌. ಬೆಂಗಳೂರಿನ ಓರ್ವ ಪದವಿಧರ ಭಯೋತ್ಪಾದಕ ಆದಾಗ ಅಂದಿನ ಪ್ರಧಾನಿ ಕಣ್ಣೀರು ಹಾಕುತ್ತಾರೆ. ಇಂದು ಮೋದಿ ಸರ್ಕಾರದಲ್ಲಿ ಪಾಕಿಸ್ತಾನ ದಾಳಿ ಮಾಡಿದರೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಠ ಕಲಿಸಿತು. ಇದು ಮೋದಿ ತಾಕತ್ತು ಎಂದರು.

ಈ‌ ಮೊದಲಿದ್ದ ಪಕ್ಷಗಳು ಭಾರತವನ್ನು ಅಮೆರಿಕಾ, ಸಿಂಗಾಪುರ, ಜಪಾನ್ ಮಾಡುತ್ತೇವೆಂದು ಮತ ಕೇಳುತ್ತಿದ್ದವು. ಆದರೆ ಮೊದಲ ಬಾರಿ ಅಮೆರಿಕಾದ ಪಕ್ಷಗಳು ಅಧಿಕಾರಕ್ಕೆ ಬಂದರೆ ಮೋದಿಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ ನೀತಿ ಜಾರಿಗೆ ತುರುವುದಾಗಿ ಹೇಳುತ್ತಿವೆ ಎಂದರು.

ಕಾಂಗ್ರೆಸ್ ಬಡವರ ಹೆಸರು ಹೇಳಿ ಅಧಿಕಾರ ಅನುಭವಿಸಿದವು. ಆದರೆ ಬಡ ರೈತರ ಖಾತೆಗೆ ಹಣ ಹಾಕಿದ್ದು ಮೋದಿ ಸರ್ಕಾರ. ಸ್ವಾತಂತ್ರ್ಯ ನಂತರ ಸುಮಾರು 8 ಕೋಟಿ ರೈತರ ಖಾತೆಗೆ 6000 ರೂ. ಸಹಾಯಧನ ಹಾಕಿದ ಸರ್ಕಾರ ಬಿಜೆಪಿ ಎಂದರು.

ಕಾಂಗ್ರೆಸ್ ಗೆ ಈಗ ಭಯ ಶುರುವಾಗಿದೆ. ಶಾಶ್ವತವಾಗಿ ವಿರೋಧ ಪಕ್ಷದಲ್ಲಿ‌ ಕೂರಬೇಕಾದ ಚಿಂತೆ‌ ಕಾಡುತ್ತಿದೆ. ಕಾಂಗ್ರೆಸ್ ಗೆ ಸ್ವಾತಂತ್ರ್ಯ ಹೋರಾಟದ ಹಾಗೂ ಮಹಾತ್ಮ ಗಾಂಧಿಯ ಪುಣ್ಯ ಇತ್ತು. ಅದಕ್ಕಾಗಿ ವಿದ್ಯುತ್ ಕಂಬ ನಿಲ್ಲಿಸಿದರೂ ಕಾಂಗ್ರೆಸ್ ಗೆಲ್ಲುತ್ತಿತ್ತು.

ಆದರೆ ಈಗ ಭಾರತ ಪರಿವರ್ತನೆ ಆಗಿದೆ. ರಾಹುಲ್ ಗಾಂಧಿಗೇ ಗೆಲ್ಲುವ ಶಕ್ತಿ ಇಲ್ಲ ಎಂದರು.

ಜಾತ್ಯತೀತವಾದ ಎನ್ನುವ ಕಾಂಗ್ರೆಸ್ ತನ್ನ ಅವಧಿಯಲ್ಲಿ ಯಾವುದೇ ದೇವಸ್ಥಾನದ ಶಿಲಾನ್ಯಾಸ ನಿರ್ಮಾಣ ಮಾಡಲಿಲ್ಲ. ಕಾಂಗ್ರೆಸ್ ನ ಜಾತ್ಯತೀತ ಸಿದ್ದಾಂತದಲ್ಲಿ ಹಿಂದುಗಳಿಲ್ಲವೇ? ಎಂದು ಕಟೀಲ ಪ್ರಶ್ನಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಕರ್ನಾಟಕದ ಮುಖಂಡರೊಬ್ಬರು ರಾಮ ಮಂದಿರಕ್ಕೆ ಹಣ ಕೊಡಲ್ಲ ಎನ್ನುತ್ತಾರೆ. ಅದು ಸುಪ್ರೀಂ ಕೋರ್ಟ್ ಗೆ ಮಾಡಿದ ಅವಮಾನ ಎಂದರು.

ರಾಮನ ಮೇಲೆ ಅಭಿಮಾನ ಇದ್ದವರು ಮಾತ್ರ ದೇಣಿಗೆ ಕೊಡಲಿ ಎಂದು ಅಯೋಧ್ಯ ರಾಮಮಂದಿರ ಟ್ರಸ್ಟ್ ಹೇಳಿದೆ. ಅದರ ಲೆಕ್ಕಾಚಾರವೂ ತಿಳಿಸಿದೆ. ಭವಿಷ್ಯದಲ್ಲಿ ರಾಮ ಮಂದಿರ ನಿರ್ಮಾಣ ಆಗಲಿದೆ ಎಂದರು.

ಯಡಿಯೂರಪ್ಪ ಸರ್ಕಾರ ಡ್ರಗ್ಸ್ ಮುಕ್ತ ರಾಜ್ಯ ನಿರ್ಮಿಸಿದೆ. ಗೋ ಹತ್ಯೆ ನಿಷೇಧ ಮಾಡಿದೆ‌. ಲವ್ ಜಿಹಾದ್ ನಿಷೇಧವೂ ಸರ್ಕಾರ ಮಾಡಲಿದೆ ಎಂದರು.

ಸಿಎಎ ಹೆಸರಲ್ಲಿ, ರೈತರ ಹೆಸರಲ್ಲಿ ಬೆಂಕಿ ಹೆಚ್ಚುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಇಂಥ ಅನೇಕ ಹೋರಾಟಗಳನ್ನು ಮೆಟ್ಟಿ ನಿಂತವರು ಮೋದಿ. ದೇಶದಲ್ಲಿ ಗಲಭೆ ಎಬ್ಬಿಸುವ ಕುತಂತ್ರ ಇನ್ನು ನಡೆಯದು ಎಂದು ಕಟೀಲ ತಿಳಿಸಿದರು.

ಬೀದರ ಸಂಸದ ಭಗವಂತ ಕೂಬಾ, ಸಂಸದ ರಮೇಶ ಜಿಗಜಿಣಗಿ, ಶಾಸಕ ಪಿ. ರಾಜೀವ, ಸಂಜೀವ ಬೆಟ್ಟದೂರ, ಸೋಮನಗೌಡ ಪಾಟೀಲ ಸಾಸನೂರ, ಬಾನು ಪ್ರಕಾಶಜಿ,

ಶಿವಯೋಗಿ ಸ್ವಾಮಿ, ಆರ್.ಎಸ್‌. ಪಾಟೀಲ ಕೂಚಬಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net