ಗೌರಿಬಿದನೂರು: ತಾಲೂಕಿನ ಜೋಡಿಬಿಸಲಹಳ್ಳಿಯಲ್ಲಿ ಭಾರಿ ಗಾಳಿ, ಮಳೆಗೆ ವಿದ್ಯುತ್ ತಂತಿ ತುಂಡಾಗಿ ಕುರಿ ಶೆಡ್ ಮೇಲೆ ಬಿದ್ದು 15 ಕುರಿಗಳು ಮೃತಪಟ್ಟಿವೆ. ಸುಬ್ಬಯ್ಯ ಎಂಬುವವರು 55 ಕುರಿಗಳನ್ನು ಸಾಕಿದ್ದು, ಶೆಡ್ ಬಳಿಯಿರುವ ಪಕ್ಕದ ಮನೆಗೆ ನೀಡಿರುವ ವಿದ್ಯುತ್ ಸಂಪರ್ಕದ ತಂತಿ ಭಾನುವಾರ ರಾತ್ರಿ ಗಾಳಿ, ಮಳೆಗೆ ತುಂಡಾಗಿ, ಶೆಡ್ಗೆ ಅಳವಡಿಸಿರುವ ಶೆಡ್ ಮೇಲೆ ಬಿದ್ದಿದೆ, ಅದಕ್ಕೆ ತಾಕಿಕೊಂಡು ಮಲಗಿದ್ದ 15 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಉಳಿದ ಕುರಿಗಳು ದೂರ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿವೆ ಎನ್ನಲಾಗಿದೆ. ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.