

ಕಂಪ್ಲಿ: ಬರ ಪರಿಹಾರ ಕ್ರಮ ಕೈಗೊಳ್ಳಲು ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯನ್ನು ಎಸಿ ಹೇಮಂತ ಕುಮಾರ ಅವರು ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದರು.
ತಾಲೂಕಿನಲ್ಲಿ ಮೆಟ್ರಿಯ ಎರಡು, ನೆಲ್ಲುಡಿಯ ಎರಡು ಹಾಗೂ ದೇವಲಾಪುರದ ಒಂದು ಸೇರಿ ಒಟ್ಟು 5 ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆಯಲಾಗುತ್ತಿದೆ. ಮೆಟ್ರಿ ಗ್ರಾಮದ ಖಾಸಗಿ ಬೋರ್‌ವೆಲ್ ನೀರು ಪೂರೈಕೆಗೆ ಅನುಮೋದನೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಪಂ ಇಒ ಆರ್.ಕೆ.ಶ್ರೀಕುಮಾರ್ ತಿಳಿಸಿದರು.
15 ದಿನಕ್ಕೊಮ್ಮೆ ಖಾಸಗಿ ಬೋರ್‌ವೆಲ್ ಮಾಲೀಕರಿಗೆ ನಿಗದಿತ ಶುಲ್ಕ ಪಾವತಿಸಬೇಕು ಎಸಿ ಸೂಚನೆ ನೀಡಿದರು.
ತಾಲೂಕಿನಲ್ಲಿ ಅಗತ್ಯ ಮೇವು ದಾಸ್ತಾನಿದ್ದು, ಕೊರತೆ ಇಲ್ಲವೆಂದು ಪಶು ಆಸ್ಪತ್ರೆಯ ಪ್ರಭಾರ ಎಡಿ ಡಾ.ಕೆ.ಯು.ಬಸವರಾಜ ತಿಳಿಸಿದರು. ಪಟ್ಟಣದ 23 ವಾರ್ಡ್‌ಗಳಲ್ಲಿ ನೀರು ಪೂರೈಕೆ ಸಮಸ್ಯೆ ಇಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಗೊರೇಬಾಳ್ ರೆಡ್ಡಿರಾಯನಗೌಡ ತಿಳಿಸಿದರು.
ಮಳೆಗಾಲ ಆರಂಭಗೊಂಡಿದ್ದು ಕಚ್ಚಾ ಮನೆಗಳು ಕುಸಿಯುವ ಸಂಭವವಿರುತ್ತದೆ. ಗ್ರಾಮ ಆಡಳಿತಾಧಿಕಾರಿ, ಕೇಂದ್ರಸ್ಥಾನದಲ್ಲಿದ್ದು 24ಗಂಟೆಯೊಳಗೆ ವರದಿ ಸಲ್ಲಿಸಿ ಅಗತ್ಯ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ತಡೆಯುವ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಪುರಸಭೆ ಆಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ನಿಗಾವಹಿಸಬೇಕು.
ನೀರು ಪೂರೈಕೆ ಟ್ಯಾಂಕ್‌ಗಳನ್ನು ನಿಗದಿತ ಅವಧಿಯಲ್ಲಿ ಸ್ವಚ್ಛಗೊಳಿಸುವಂತೆ, ವಾಲ್ವ್‌ಗಳಲ್ಲಿ ಗಲೀಜು ನೀರು ನಿಲ್ಲದಂತೆ, ತಿಪ್ಪೆ ಚರಂಡಿಗಳ ಮೂಲಕ ಕುಡಿವ ನೀರಿನ ಪೂರೈಕೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಎಸಿ ಹೇಮಂತ ಸೂಚಿಸಿದರು.