

ಬೆಂಗಳೂರು: ಶಂಕರಾಚಾರ್ಯರು ತತ್ವಜ್ಞಾನಿಯಾಗಿ ಹಿಂದು ಧರ್ಮದ ಪ್ರಚಾರ ಹಾಗೂ ರಕ್ಷಣೆ ಮಾಡಿದ್ದಾರೆ. ಭಾರತವನ್ನು ರಕ್ಷಿಸಲು ಬುದ್ಧ ಹಾಗೂ ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಕಾರಣವೆಂದು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದರು ಎಂದು ಬಸವನಗುಡಿಯ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನಿತ್ಯಸ್ಥಾನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಅಯೋಧ್ಯಾ ಪ್ರಕಾಶನ ವತಿಯಿಂದ ಭಾನುವಾರ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿಯ ನಾಣಿ ಸಭಾಂಗಣದಲ್ಲಿ ಆಯೋಜಿಸಿದ್ದ 15 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಮಾತನಾಡಿ, ವೈಶಾಖ ಮಾಸದಲ್ಲಿ ನಮ್ಮ ದೇಶಕ್ಕೆ, ತತ್ವಜ್ಞಾನಕ್ಕೆ ಕೊಡುಗೆ ನೀಡಿದ ಬಸವಣ್ಣ, ರಾಮಾನುಜಾಚಾರ್ಯ, ಶಂಕರಾಚಾರ್ಯರಂತಹ ಜ್ಞಾನಿಗಳ ಜಯಂತಿ ಆಚರಿಸಲಾಗುತ್ತದೆ. ಇವರೆಲ್ಲ ಆದ್ಯಾತ್ಮ ಜೀವಿಗಳಾಗಿದ್ದಾರೆ. ಆದರೆ, ಬುದ್ಧ ಹಾಗೂ ಬಸವಣ್ಣ ಅವರನ್ನು ನಾಸ್ತಿಕರು ಅಪಹರಣ ಮಾಡುತ್ತಾರೆ. ರಾಮಾನುಜಾರ್ಯ ಹಾಗೂ ಶಂಕರಾಚಾರ್ಯರನ್ನು ಯಾವಾಗ ಅಪಹರಿಸುತ್ತಾರೋ ಗೊತ್ತಿಲ್ಲ ಎಂದರು.
ಪುರಾತತ್ವಶಾಸ್ತ್ರದಲ್ಲಿ ಶಂಕರಾಚಾರ್ಯರು ಬುದ್ಧನನ್ನು ವಿರೋಧಿಸಿದ್ದರು ಎಂಬ ಬಗ್ಗೆ ಯಾವುದೇ ದಾಖಲೆಗಳು ಲಭಿಸಲಿಲ್ಲ. ಹೀಗಿದ್ದರೂ ಶಂಕರರು ಬುದ್ಧ ವಿರೋಧಿಯಾಗಿದ್ದರೆಂದು ಹಣೆಪಟ್ಟಿ ಕಟ್ಟಲಾಗಿತ್ತು. ಬೌದ್ಧ ಮತ ಭಾರತದಲ್ಲಿ ನಶಿಸಲು ಶಂಕರಾಚಾರ್ಯರು ಅಥವಾ ಹಿಂದುಗಳು ಕಾರಣರಲ್ಲ. ಮುಸ್ಲಿಮರು ಎಂದು ಕಮ್ಯುನಿಸ್ಟ್ ವಿದ್ವಾಂಸರೊಬ್ಬರು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಮಾತನಾಡಿ, ಪಠ್ಯ ಪುಸ್ತಕಗಳ ಮೂಲಕ ಬ್ರಿಟಿಷರ ಆಗಮನದ ನಂತರ ಭಾರತ ಹೇಗೆ ಉದ್ಧಾರವಾಯಿತು ಎಂಬುದನ್ನು ವಿದ್ಯಾರ್ಥಿಗಳು ಓದುವಂತೆ ಮಾಡಲಾಗುತ್ತಿದೆ. ಬ್ರಿಟಿಷರು ಬರುವ ಮುನ್ನವೂ ಭಾರತವು ಶ್ರೇಷ್ಠತೆಯಿಂದ ಕೂಡಿತ್ತು. ಒಂದು ಕಾಲದಲ್ಲಿ ಜ್ಞಾನ ಶಾಖೆಗಳಿಗೆ ಭಾರತ ಗುರುವಾಗಿತ್ತು. ಆದರೆ ಇಂದು ದೇಶದ ಬಗ್ಗೆ ನಕರಾತ್ಮಕಾವಾಗಿ ಬಿಂಬಿಸಲು ವ್ಯವಸ್ಥಿತವಾದ ಚಿಂತನೆ ಹುಟ್ಟಿಕೊಳ್ಳುತ್ತಿದೆ ಎಂದರು.