

ಕಿರಣ ಹೂಗಾರ ಅಕ್ಕಿಆಲೂರ
ವಾಡಿಕೆಯಂತೆ ಮಳೆಯಿಲ್ಲದೆ ರೈತರು ಕಂಗೆಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಕಳಪೆ ಬೀಜವನ್ನು ಉತ್ತಮ ತಳಿಯದ್ದು ಎಂದು ನಂಬಿಸಿ ಮಾರಾಟ ಮಾಡಿ ರೈತರ ಕನಸು ನುಚ್ಚುನೂರಾಗಿಸುವ ಖದೀಮರು ಆಟ ಆಡಿರುವ ಪ್ರಕರಣಗಳು ಕಂಡುಬರುತ್ತಿವೆ.
ಸಮೀಪದ ಶೀಗಿಹಳ್ಳಿ ಗ್ರಾಮದಲ್ಲಿ ಮೆಣಸಿನಕಾಯಿ ಬೆಳೆ ಸಂಪೂರ್ಣ ನೆಲಕ್ಕಚ್ಚಿದ್ದು, ಇದಕ್ಕೆ ಕಳಪೆ ಬೀಜವೇ ಕಾರಣವೆಂದು ರೈತರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಶೀಗಿಹಳ್ಳಿ ಗ್ರಾಮದ ರೈತರಾದ ಶಿವಪುತ್ರಪ್ಪ ಉಳ್ಳಾಗಡ್ಡಿ, ಲೋಕಪ್ಪ ಉಪ್ಪಣಸಿ, ವೀರೇಶ ಉಪಣ್ಣಸಿ, ಮಲ್ಲಿಕಾರ್ಜುಯ್ಯ ಹಿರೇಮಠ, ಕುಮಾರ ಉಪ್ಪಣಸಿ ಮತ್ತು ರವಿ ಉಳ್ಳಾಗಡ್ಡಿ ಎಂಬುವರು ತಾವು ಒಟ್ಟು 15 ಎಕರೆಗಳಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ಕಳಪೆ ಬೀಜದಿಂದ ನೆಲಕಚ್ಚಿದೆ ಎಂದು ಆರೋಪಿಸಿದ್ದಾರೆ.
ಹಾವೇರಿಯ ಆಗ್ರೋ ಸೆಂಟರ್ ಒಂದರಲ್ಲಿ ಶೀಗಿಹಳ್ಳಿ ಗ್ರಾಮದ ರೈತರು ಕಂಪನಿಯೊಂದರ ನಿರ್ದಿಷ್ಟ ಹೆಸರಿನ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರಂತೆ. ಅದು ಕಳಪೆಯಾಗಿದ್ದು, ಫಸಲು ಬಾರದೆ ಕಂಗಾಲಾಗಿದ್ದೇವೆ ಎಂದು ರೈತರು ತೋಟಗಾರಿಕೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಳೆದ 5 ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ ಪರಿಣಾಮ, ಭತ್ತ ಮತ್ತು ಗೋವಿನಜೋಳ ಬೆಳೆಯುತ್ತಿರುವ ರೈತರು, ಜೂನ್ ತಿಂಗಳ ಪೂರ್ವದಲ್ಲಿ ತಮ್ಮ ಖರ್ಚಿಗಾಗಿ ಮೆಣಸಿನಕಾಯಿ ಬೆಳೆಯುವ ಪದ್ಧತಿ ಹಾಕಿಕೊಂಡಿದ್ದಾರೆ. ಅದರಂತೆ ಈ ವರ್ಷವೂ ಮಾರ್ಚ್ ತಿಂಗಳಲ್ಲಿ ನಾಟಿ ಮಾಡಿದ್ದ ಮೆಣಸಿನಕಾಯಿ ಬೆಳೆ ಕೈಕೊಟ್ಟಿದೆ. ಸರಳ ವ್ಯವಸಾಯವಾಗಿರುವ ಮೆಣಸಿನಕಾಯಿ ಬೆಳೆದ ರೈತರು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಖರ್ಚು ಹೊರತುಪಡಿಸಿ ಪ್ರತಿ ಎಕರೆಗೆ 4 ಲಕ್ಷ ರೂ. ಮಿಕ್ಕಿ ಗಳಿಸುತ್ತಿದ್ದರು.
ಮಾರ್ಚ್ ತಿಂಗಳಲ್ಲಿ ನಾಟಿ ಮಾಡಲು ಹಾಕಿದ್ದ ಬೀಜದ ಪರಿಣಾಮ ಬೆಳೆಗೆ ಅಂಟಿಕೊಂಡ ಮುಟೂರ ರೋಗಕ್ಕೆ ಕೀಟನಾಶಕ ಸಿಂಪಡಿಸಿದರೂ ಮುಕ್ತಿ ದೊರೆಯಲಿಲ್ಲ. ಒಂದು ಎಕರೆಗೆ ಕೇವಲ ಶೇ. 10ರಷ್ಟು ಬೆಳೆ ಬಂದಿದೆ. ಅದು ಸಹ ಕೀಟದಿಂದ ಕೂಡಿದೆ ಎಂದು ರೈತರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹಾನಗಲ್ಲ ತಾಲೂಕು ಮಾತ್ರವಲ್ಲದೆ, ಪಕ್ಕದ ಹಾವೇರಿ ತಾಲೂಕಿನ ನೂರಾರು ರೈತರು ಕಳಪೆ ಬೀಜ ಬಿತ್ತಿ ಕೈ ಸುಟ್ಟುಕೊಂಡಿದ್ದಾರೆ. ಇಳುವರಿ ಬಾರದೆ, ನಿರ್ವಹಣೆಗಾಗಿ ಮಾಡಿದ ಖರ್ಚು ವೆಚ್ಚವೂ ಸಹ ದೊರೆಯದೆ ಕಂಗಾಲಾಗಿದ್ದಾರೆ. ರೈತ ಸಂಘಟನೆ ಮೂಲಕ ತೋಟಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಲಾಗಿರುವ ದೂರಿನನ್ವಯ ಸೂಕ್ತ ಕ್ರಮವಾದರೆ ಮುಂದೆ ಕಳಪೆ ಬೀಜ ಮಾರಾಟಕ್ಕೆ ಕಡಿವಾಣ ಬೀಳುತ್ತದೆ ಎನ್ನುತ್ತಾರೆ ರೈತರು.
ಕಡಿಮೆ ಶ್ರಮ ಮತ್ತು ಉತ್ತಮ ಆದಾಯ ಅಂದುಕೊಂಡು ಮೆಣಸಿಕಾಯಿ ಬೆಳೆ ಬೆಳೆದವು. ಈಗ ಕೈಸುಟ್ಟುಕೊಂಡಿದ್ದೇವೆ. 7 ರೈತರು ಒಟ್ಟು 15 ಎಕರೆಯಲ್ಲಿ ಬೀಜ ಬಿತ್ತನೆ ಮಾಡಿದ್ದೇವೆ. ಅದು ಕಳಪೆಯಾಗಿದ್ದರಿಂದ ಫಸಲು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಶಿವಪುತ್ರಪ್ಪ ಉಳ್ಳಾಗಡ್ಡಿ, ಶೀಗಿಹಳ್ಳಿ ರೈತ
ಹಾನಗಲ್ಲ ತಾಲೂಕಿನ ಶೀಗಿಹಳ್ಳಿ ಗ್ರಾಮದ ಹಲವು ರೈತರು ಮೆಣಸಿನಕಾಯಿ ಗಿಡಕ್ಕೆ ಕಾಯಿ ಹಿಡಿದಿಲ್ಲ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಗೆ ಪತ್ರ ಬರೆಯಲಾಗಿದ್ದು, ಕ್ಷೇತ್ರ ಸಮೀಕ್ಷೆ ಕೈಗೊಂಡು ವರದಿ ನೀಡುವಂತೆ ತಿಳಿಸಲಾಗಿದೆ. ಸದ್ಯದಲ್ಲೇ ವಿಜ್ಞಾನಿಗಳು ಆಗಮಿಸಲಿದ್ದಾರೆ. ಮಂಜುನಾಥ ಬಣಕಾರ, ಹಿರಿಯ ತೋಟಗಾರಿಕೆ ನಿರ್ದೇಶಕರು