

ರಾಮನಗರ: ಬೆಂಗಳೂರು ಹೊರವಲಯದಲ್ಲಿ ಎಸ್‌ಟಿಆರ್‌ಆರ್ ರಿಂಗ್ ರೋಡ್ ನಿರ್ಮಾಣಕ್ಕೆ ಕೇಂದ್ರದ ಪಾಲು 1,410 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ ಎಂದು ಸಂಸದ ಡಾ ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
ರಾಮನಗರದ ತಿಮ್ಮೇಗೌಡನದೊಡ್ಡಿ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಮಸ್ಯೆ ಜತೆಗೆ ಬೆಂಗಳೂರು ಹೊರವಲಯದಲ್ಲಿ ಎಸ್‌ಟಿಆರ್‌ಆರ್ ರಿಂಗ್ ರೋಡ್ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಭೂ ಸ್ವಾಧೀನಕ್ಕೆ 2,110 ಕೋಟಿ ರೂ. ನೀಡಬೇಕಾಗುತ್ತೆ. ಇದರಿಂದ ಹಾರೋಹಳ್ಳಿ, ಕನಕಪುರ, ಮಾಗಡಿ, ಆನೇಕಲ್ ಸಂಚಾರಕ್ಕೆ ಅನುಕೂಲ ಆಗಲಿದೆ. ನಾನು ಮತ್ತು ದೇವೇಗೌಡರು, ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇವೆ ಎಂದರು.
ಜತೆಗೆ, ತೆಂಗು ಬೆಳೆಗಾರರ ಬಗ್ಗೆಯೂ ಮಾಹಿತಿ ನೀಡಿದ್ದು, ಅವರಿಗೆ ಬರಬೇಕಾದ ಹಣವನ್ನು ಬಿಡುಗಡೆ ಮಾಡುವುದಾಗಿ ಸಂಬಂಧಿಸಿದವರು ತಿಳಿಸಿದ್ದಾರೆ. ಕನಕಪುರ ಭಾಗದಲ್ಲಿ ಆನೆದಾಳಿ ಹೆಚ್ಚಾಗಿದೆ. ಬ್ಯಾರಿಕೇಡ್ ಅಳವಡಿಕೆಗೆ ಕೇಂದ್ರ ಸ್ಪಂದಿಸುವ ಭರವಸೆ ನೀಡಿದೆ ಎಂದು ಹೇಳಿದರು.
ಕಾಲವೇ ಎಲ್ಲಕ್ಕೂ ಉತ್ತರ ಕೊಡಲಿದೆ
ಮುಖ್ಯಮಂತ್ರಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಂಬಂಧ ಅದರದ್ದೆ ಆದ ಕಾನೂನು ವ್ಯವಸ್ಥೆ ಇದೆ. ಏನಾಗುತ್ತೋ ನೋಡೋಣ, ಕಾಲವೇ ಇದಕ್ಕೆ ಉತ್ತರ ಕೊಡಲಿದೆ ಎಂದು ಸಂಸದ ಡಾ ಸಿ.ಎನ್. ಮಂಜುನಾಥ್ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಮಾತನಾಡಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದರು.