

ವಿಜಯವಾಣಿ ಸುದ್ದಿಜಾಲ ಕಾರವಾರ
ಜಿಲ್ಲೆಯಲ್ಲಿ ಭಾನುವಾರ 12 ಜನರು ಕರೊನಾದಿಂದ ಗುಣ ಹೊಂದಿದ್ದರೆ, 14 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 189ಕ್ಕೆ ತಲುಪಿದೆ. 41 ಸಕ್ರಿಯ ಪ್ರಕರಣಗಳಿವೆ. ಹೊಸ ಸೋಂಕಿತರಲ್ಲಿ ಹೆಚ್ಚಿನ ಜನರು ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ ಎಂಬುದು ಗಮನಾರ್ಹ.
ಫಿಲಿಫೈನ್ಸ್ ದೇಶದಿಂದ ಐದು ದಿನದ ಹಿಂದೆ ಗೋವಾದಿಂದ ಮರಳಿ ಕ್ವಾರಂಟೈನ್ನಲ್ಲಿದ್ದ ಕಾರವಾರ ಕಡವಾಡದ 29 ವರ್ಷದ ಪುರುಷನಲ್ಲಿ (ಯುಕೆ-176) ಸೋಂಕು ದೃಢಪಟ್ಟಿದೆ. ಈತನ ಸಂಪರ್ಕಕ್ಕೆ ಬಂದ 12 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಸೊಲ್ಲಾಪುರದಿಂದ ಆಗಮಿಸಿ ಕರೊನಾಕ್ಕೆ ತುತ್ತಾಗಿದ್ದ 64 ವರ್ಷದ ಮಹಿಳೆ (ಯುಕೆ-123) ಸಂಪರ್ಕಕ್ಕೆ ಬಂದಿದ್ದ ಸದಾಶಿವಗಡದ 42 ವರ್ಷದ ವ್ಯಕ್ತಿಯಲ್ಲಿ (ಯುಕೆ-177) ಕರೊನಾ ದೃಢಪಟ್ಟಿದೆ.
ಆರೋಗ್ಯ ಪರೀಕ್ಷೆಗಾಗಿ ಮುಂಬೈಗೆ ತೆರಳಿ ವಾಪಸಾಗಿ ಹೋಂ ಕ್ವಾರಂಟೈನ್ನಲ್ಲಿದ್ದ ದಾಂಡೇಲಿ ಪಟೇಲ್ ನಗರದ 28 ವರ್ಷದ ವ್ಯಕ್ತಿಯಲ್ಲಿ (ಯುಕೆ-180) ಸೋಂಕು ದೃಢಪಟ್ಟಿದ್ದು, ಆತನ ಪತ್ನಿಯ ವರದಿ ನೆಗೆಟಿವ್ ಬಂದಿದೆ. ದುಬೈನಿಂದ ಆಗಮಿಸಿದ ಭಟ್ಕಳ ನವಾಯತ ಕಾಲೋನಿಯ 45 ವರ್ಷದ ಪುರುಷ (ಯುಕೆ-178), ಮುಂಬೈನಿಂದ ಆಮಿಸಿದ 31 ವರ್ಷದ ಶಿರಾಲಿಯ ಯುವಕ (ಯುಕೆ-179), ಶಿರಸಿಯ ಕುಪ್ಪಗಡ್ಡೆಯ 23 ವರ್ಷದ ಯುವಕ (ಯುಕೆ-182), ಸಿಂಪಿ ಗಲ್ಲಿಯ 36 ವರ್ಷದ ವ್ಯಕ್ತಿ (ಯುಕೆ-183), ಮಂಜು ಹೋಟೆಲ್ ಸಮೀಪದ 56 ವರ್ಷದ ವ್ಯಕ್ತಿ (ಯುಕೆ-186), ಗಣೇಶ ನಗರದ 3 ವರ್ಷದ ಬಾಲಕಿ(ಯುಕೆ-187), ಮಹಾರಾಷ್ಟ್ರ ಸಿಂಧುದುರ್ಗದಿಂದ ಆಗಮಿಸಿದ ಜೊಯಿಡಾ ಶಿಂಗರಗಾಂವನ 19 ವರ್ಷದ ಯುವಕನಿಗೆ (ಯುಕೆ-184) ಕರೊನಾ ದೃಢಪಟ್ಟಿದೆ.
ಮುಂಡಗೋಡ ತಾಲೂಕಿನ ಟಿಬೆಟಿಯನ್ ಕಾಲನಿ ನಂ. 1ರಲ್ಲಿ ಜೂನ್ 17ರಂದು ಡಾರ್ಜಿಲಿಂಗ್ನಿಂದ ಬಂದ 27 ವರ್ಷದ ಗಜಾಂಗ್ ಮೆಡಿಕಲ್ ಸೊಸೈಟಿಯ ಸಿಬ್ಬಂದಿಗೆ (ಯುಕೆ-181) ಕರೊನಾ ದೃಢಪಟ್ಟಿದೆ. ಈತನನ್ನು ಸೊಸೈಟಿಯ ಪಕ್ಕದ ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಅಂಕೋಲಾದಲ್ಲಿ ಇಬ್ಬರಿಗೆ: ತಾಲೂಕಿನೆಲ್ಲೆಡೆ ಓಡಾಡಿ ಆತಂಕಕ್ಕೆ ಕಾರಣನಾಗಿದ್ದ ಅಂಕೋಲಾ ಅಗ್ರಗೋಣದ 50 ವರ್ಷದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಇಬ್ಬರಲ್ಲಿ ಮಾತ್ರ ಸದ್ಯ ಸೋಂಕು ಪತ್ತೆಯಾಗಿದೆ. ಅಂಕೋಲಾ, ಗೋಕರ್ಣ ಭಾಗದ ಜನರ ಆತಂಕ ಕೊಂಚ ದೂರವಾಗಿದೆ.
ಈತನ 40 ವರ್ಷದ ಪತ್ನಿ (ಯುಕೆ-188), 23 ವರ್ಷದ ಪುತ್ರಿ (ಯುಕೆ-189)ಯಲ್ಲಿ ರೊಗ ಕಂಡುಬಂದಿದೆ. ಈತ ಚಿಕಿತ್ಸೆ ಪಡೆದಿದ್ದ ವೈದ್ಯರು, ಸಂಪರ್ಕಕ್ಕೆ ಬಂದಿದ್ದ ಹಲವರ ಗಂಟಲ ದ್ರವದ ಮಾದರಿ ನೆಗೆಟಿವ್ ಬಂದಿದೆ. ಒಂದೇ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಅಂಕೋಲಾ ಹಾಗೂ ಕುಮಟಾದ 100ಕ್ಕೂ ಅಧಿಕ ಜನರ ಸ್ವ್ಯಾಬ್ ಸಂಗ್ರಹಿಸಲಾಗಿತ್ತು.
12 ಜನರ ಬಿಡುಗಡೆ: ಕರೋನಾ ಸೋಂಕಿತ 12 ಜನರು ಕಾರವಾರ ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣ ಹೊಂದಿದ್ದು, ಭಾನುವಾರ ಬಿಡುಗಡೆ ಮಾಡಲಾಗಿದೆ. ಹಳಿಯಾಳದ ಇಬ್ಬರು, ಭಟ್ಕಳದ ಇಬ್ಬರು, ಶಿರಸಿ, ಕಾರವಾರ, ಹೊನ್ನಾವರದ ತಲಾ ಒಬ್ಬರು, ಕುಮಟಾದ ಮೂವರು ಹಾಗೂ ಸಂಶಿ ಕಲಗದ್ದೆಯ ಇಬ್ಬರನ್ನು ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಗೊಂಡವರಲ್ಲಿ 78 ವರ್ಷದ ವೃದ್ಧ ಹಾಗೂ 6 ಮಹಿಳೆಯರಿದ್ದಾರೆ.