13 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ

13 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ
Published on

ಚನ್ನರಾಯಪಟ್ಟಣ: ರಾಜ್ಯ ಸರ್ಕಾರಿ ನೌಕರರ ಸಂಘ ಚನ್ನರಾಯಪಟ್ಟಣ ಘಟಕದ 31ನಿರ್ದೇಶಕ ಸ್ಥಾನಕ್ಕೆ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿರುವ 18 ಸ್ಥಾನಗಳನ್ನು ಹೊರತುಪಡಿಸಿ 13 ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ವಿವಿಧ ಇಲಾಖೆಗಳಿಂದ ನೌಕರರು ಆಯ್ಕೆಯಾಗಿ ಸಂಭ್ರಮಿಸಿದರು.

ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಸೋಮವಾರ ನಡೆದ ನೌಕರರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆ ರಾಜಕೀಯ ಪಕ್ಷಗಳ ಚುನಾವಣೆಯನ್ನೇ ಮೀರಿಸುವಂತಿತ್ತು.

ಕಣದಲ್ಲಿದ್ದ ಅಭ್ಯರ್ಥಿಗಳು ನೌಕರರನ್ನು ಕಡೇ ಕ್ಷಣದವರೆಗೂ ಮನವೊಲಿಸಿ ತಮಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈಗಾಗಲೇ 22 ವಿವಿಧ ಇಲಾಖೆಗಳಿಂದ 18 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ 13 ಸ್ಥಾನಗಳಿಗೆ 7 ಇಲಾಖೆಗಳಿಂದ 30 ಸ್ಪರ್ಧಿಗಳು ಕಣದಲ್ಲಿದ್ದರು. ಪಶುಪಾಲನಾ ಇಲಾಖೆಯ ಒಂದು ಸ್ಥಾನಕ್ಕೆ ಮೂವರು ಸ್ಪರ್ಧಿಗಳು, ಪ್ರಾಥಮಿಕ ಶಾಲೆ ಇಲಾಖೆಯಿಂದ 3ಸ್ಥಾನಗಳಿಗೆ 7, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 3ಸ್ಥಾನಗಳಿಗೆ 6ಜನ ಕಣದಲ್ಲಿದ್ದರೆ, ನ್ಯಾಯಾಂಗ ಇಲಾಖೆಗೆ 2ಸ್ಥಾನಗಳಿಗೆ 5ಜನ, ಗ್ರಾಮೀಣಾಭಿವೃದ್ಧಿ ಇಲಾಖೆಯ 2ಸ್ಥಾನಗಳಿಗೆ 5 ಸ್ಪರ್ಧಿಗಳು ಹಾಗೂ ಕೈಗಾರಿಕೆ, ಕಾರ್ಮಿಕ ಇಲಾಖೆಯಿಂದ 1ಸ್ಥಾನಕ್ಕೆ ಇಬ್ಬರು ಹಾಗೂ ಕಾವೇರಿ ನೀರಾವರಿ ನಿಗಮದಿಂದ 1 ಸ್ಥಾನಕ್ಕೆ ಇಬ್ಬರು ಸ್ಪರ್ಧಿಗಳು ಕಣದಲ್ಲಿದ್ದರು.

ಸಂಜೆ 4ಗಂಟೆ ನಂತರ ಮತ ಎಣಿಕೆ ಕಾರ್ಯ ನಡೆಯಿತು. ಕಡಿಮೆ ಮತಗಳನ್ನು ಹೊಂದಿದ್ದ ಕೈಗಾರಿಕೆ, ಕಾರ್ಮಿಕ ಇಲಾಖೆ, ಪಶುಪಾಲನಾ ಇಲಾಖೆ, ಕಾವೇರಿ ನೀರಾವರಿ ನಿಗಮ, ಮತ್ತು ನ್ಯಾಯಾಂಗ ಇಲಾಖೆಗಳ ಮತ ಎಣಿಕೆ ಕಾರ್ಯವು ಬೇಗ ಮುಗಿದು, ಫಲಿತಾಂಶವು ಹೊರಬಿತ್ತು. ಹೆಚ್ಚು ಮತಗಳನ್ನು ಹೊಂದಿದ್ದ ಪ್ರಾಥಮಿಕ ಶಿಕ್ಷಣ ಇಲಾಖೆಯ ಮತ ಎಣಿಕೆ ಕಾರ್ಯವು ರಾತ್ರಿ 7.30 ಸುಮಾರಿಗೆ ಬಂತು. ಚುನಾವಣೆ ಫಲಿತಾಂಶ ಹೊರಬಿದ್ದಂತೆಲ್ಲ ಆಯಾ ಇಲಾಖೆಗಳ ನೌಕರರು ತಮ್ಮ ಇಲಾಖೆಗಳ ಪ್ರತಿನಿಧಿಗಳಿಗೆ ಹಾರ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು.

ಚುನಾವಣೆ ನಡೆದ ಇಲಾಖೆಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸ್ಪರ್ಧಿಸಿದ್ದ ಐವರ ಪೈಕಿ ಪಿಡಿಒ ಪಿ.ಡಿ.ಕೃಷ್ಣೇಗೌಡ, ಕಾರ್ಯದರ್ಶಿ ಹನುಮೇಗೌಡ ವಿಜಯಶಾಲಿಯಾದರೇ, ಕಾವೇರಿ ನೀರಾವರಿ ನಿಗಮದಿಂದ ಬಿ.ಜೆ.ಹೇಮಂತ್‌ಕುಮಾರ್, ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆಯಿಂದ ಪುಟ್ಟಹನುಮೇಗೌಡ, ಹಾಗೂ ನ್ಯಾಯಾಂಗ ಇಲಾಖೆಯಿಂದ ಜಿ.ಆರ್.ಗಣೇಶ್ ಮತ್ತು ಕೆ.ಎಂ.ಸೋಮಶೇಖರ್ ಗೆದ್ದು ಬೀಗಿದರು. ಪಶುಪಾಲನಾ ಇಲಾಖೆಯಿಂದ ಕೆ.ಗಂಗಾಧರ್ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ 1ಮತದ ಅಂತರದಿಂದ ಗೆಲುವಿನ ನಗೆ ಬೀರಿದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರ್.ಅಚಲ್, ಸಿ.ಆರ್.ಅನುರಾಧ, ಮತ್ತು ಎಚ್.ಟಿ.ಪರಮೇಶ್ವರ ಹಾಗೂ ಹೆಚ್ಚು ಕುತೂಹಲ ಮೂಡಿಸಿದ್ದ ಪ್ರಾಥಮಿಕ ಶಿಕ್ಷಣ ಕ್ಷೇತ್ರದಿಂದ ಜಿ.ಕೆ.ಕಾಳೇಗೌಡ, ಎ.ಎಸ್.ಪ್ರಮೋದ ಮತ್ತು ಕೆ.ಮಂಜೇಗೌಡ ಗೆಲುವಿನ ನಗೆ ಬೀರಿದರು. ಚುನಾವಣಾಧಿಕಾರಿ ಜೆ.ಟಿ.ಪರಮೇಶ್ವರ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net