ವ್ಯಕ್ತಿಯ ಕಾಮದಾಟಕ್ಕೆ ಅಪ್ರಾಪ್ತೆ ಜೀವನ ಬಲಿ: ಹೆಣ್ಣು ಮಗುವಿಗೆ ಜನ್ಮ ನೀಡಿದ 13ರ ಬಾಲಕಿ

Minor Girl
Published on

ವಿಜಯಪುರ: ವ್ಯಕ್ತಿಯೊಬ್ಬನ ಕಾಮದಾಟದಿಂದ ಅಪ್ರಾಪ್ತ ಬಾಲಕಿಯ ಜೀವನ ನರಕದಲ್ಲಿ ಸಿಲುಕಿದಂತಾಗಿದೆ. 13 ವರ್ಷದ ಬಾಲಕಿ ಮೇಲಿನ ನಿರಂತರ ಅತ್ಯಾಚಾರದಿಂದಾಗಿ ಇದೀಗ ಆಕೆ ಹೆಣ್ಣು ಮಗುವಿನ ತಾಯಿಯಾಗಿದ್ದಾಳೆ.

ಸಿಂದಗಿ ತಾಲೂಕಿನ ಗೊರವಗುಂಡಗಿ ಗ್ರಾಮದ ಶರಣಬಸು ಅವರಾದಿ (35) ನೀಚ ಕೃತ್ಯವೆಸಗಿದ ಕಾಮುಕ. ಬಸವನ‌ ಬಾಗೇವಾಡಿ ಮೂಲದ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಬೆಂಗಳೂರಿನ ಕೆಂಗೇರಿ ಬಳಿಯ ಅನಿಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಳು.

ಇತ್ತ ತಾಯಿ‌ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಆರೋಪಿ ಶರಣಬಸು ಬಾಲಕಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ. ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ, ನಿರಂತರವಾಗಿ ಒಂದು ವರ್ಷದಿಂದ ಅತ್ಯಾಚಾರ ಎಸಗಿದ್ದಾನೆಂದು ಆರೋಪ ಕೇಳಬಂದಿದೆ.

ಅತ್ಯಾಚಾರದ ವಿಚಾರ ಯಾರಿಗೂ ಹೇಳದಂತೆ ಅಪ್ರಾಪ್ತೆಗೆ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಆದರೆ, ಈ‌ ವಿಚಾರ ತಾಯಿಗೆ ಗೊತ್ತಾದ ಬಳಿಕವೂ ಶರಣಬಸು ಆಕೆಗೂ ಬೆದರಿಕೆಯೊಡ್ಡಿದ್ದಾನೆ. ಆದರೆ, ಸತ್ಯ ಎಷ್ಟು ದಿನ ಅಂತ ಮರೆಮಾಚಲು ಸಾಧ್ಯ. ಹೆರಿಗೆ ಬಳಿಕ ಶರಣಬಸು ಕರ್ಮಕಾಂಡವೆಲ್ಲವೂ ಬಟಾಬಯಲಾಗಿದೆ. ನಿರಂತರ ಅತ್ಯಾಚಾರ ಪರಿಣಾಮ ಮೇ 30ರಂದು ಬಾಲಕಿ ವಿಜಯಪುರದ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ‌ ನೀಡಿದ್ದಾಳೆ.

ಇದೀಗ ಸಿಂದಗಿ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಸಂತ್ರಸ್ತ ಬಾಲಕಿ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶರಣಬಸು ಅವರಾದಿಯ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net