12ರಿಂದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಜಾತ್ರೋತ್ಸವ

Published on

ಅರಸೀಕೆರೆ: ತಾಲೂಕಿನ ಇತಿಹಾಸ ಪ್ರಸಿದ್ಧ ಯಾದಾಪುರ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಜಾತ್ರೋತ್ಸವ ಏ.12ರಿಂದ 14ರವರೆಗೆ ಜರುಗಲಿದೆ.

12ರಂದು ಮುಂಜಾನೆ ಹುಣ್ಣಿಮೆ ಅಂಗವಾಗಿ ಬೆಟ್ಟದ ಮೇಲೆ ಧ್ವಜಾರೋಹಣ, ಅಂಕುರಾರ್ಪಣೆ, ನೂರೊಂದೆಡೆ ಸೇವೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ. ಸಂಜೆ 7 ಗಂಟೆಗೆ ಬಸವೇಶ್ವರಸ್ವಾಮಿ ಉತ್ಸವ, ಗದ್ದುಗೆ ಮಂಟಪದಲ್ಲಿ ಸಾಮ್ರಾಜ್ಯೋತ್ಸವ, ಹುಲಿವಾಹನ, ಸೂರ್ಯಮಂಡಲೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, ಬಿಲ್ವ ವೃಕ್ಷೋತ್ಸವ, ಹರಕೆ ತೀರಿಸುವವರಿಗೆ ಬಾಯಿಬೀಗ, ಚಂದ್ರ ಮಂಡಲೋತ್ಸವ, ಅಗ್ನಿಕುಂಡ ಸೇವೆ ಹಾಗೂ ಕೆಂಚಮ್ಮನವರ ಸನ್ನಿಧಿಯಲ್ಲಿ ಗುಗ್ಗಳಸೇವೆ ನೆರವೇರಲಿದೆ.

13ರಂದು ಬೆಳಗ್ಗೆ ಮಹಾಮಂಗಳಾರತಿ ನಂತರ 7ರಿಂದ 8 ಗಂಟೆಯವರೆಗೆ ಮಹಾದಿವ್ಯ ರಥೋತ್ಸವ ನಡೆಯಲಿದೆ. ಬಳಿಕ ಉಯ್ಯಲೆ ಸೇವೆಯೊಂದಿಗೆ ಮಹಾಮಂಗಳಾರತಿ ಮಾಡಲಾಗುವುದು. 14ರಂದು ಮಧ್ಯಾಹ್ನ 2 ಗಂಟೆಯಿಂದ ಸ್ವಾಮಿಯವರ ಪಲ್ಲಕ್ಕಿ ಉತ್ಸವ, ಜೋಳಿಗೆ ಸೇವೆ ನಡೆಯಲಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಜಾತ್ರಾ ದಿನಗಳಂದು ದಿನವಿಡೀ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಾಲಯ ಅಡಳಿತ ಮಂಡಳಿ ಅಧ್ಯಕ್ಷ ಜಿ.ವಿ.ಬಸವರಾಜು, ವೈವಾಟ್‌ದಾರ್ ಚಂದ್ರಪ್ಪ ಹಾಗೂ ಸಿಂಗಟಗೆರೆ ರಾಮಣ್ಣ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net