12ರಂದು ಆರ್.ಧ್ರುವನಾರಾಯಣ ಪುಣ್ಯಸ್ಮರಣೆ

12ರಂದು ಆರ್.ಧ್ರುವನಾರಾಯಣ ಪುಣ್ಯಸ್ಮರಣೆ
Published on

ನಂಜನಗೂಡು: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಅವರು ನಮ್ಮನ್ನೆಲ್ಲ ಅಗಲಿ 1 ವರ್ಷ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಮಾ. 12ರಂದು ಸ್ವಗ್ರಾಮ ಹೆಗ್ಗವಾಡಿಯಲ್ಲಿ ಮೊದಲನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಂದೆಯವರು ಕುಟುಂಬಕ್ಕಿಂತಲೂ ಹೆಚ್ಚಾಗಿ ಕಾರ್ಯಕರ್ತರೊಂದಿಗೆ ಸಮಯ ಕಳೆದಿದ್ದೇ ಹೆಚ್ಚು, ಆದ್ದರಿಂದ ತಂದೆಯ ಅಭಿಮಾನಿಗಳು, ಕಾರ್ಯಕರ್ತರು, ನನ್ನ ತಂದೆಯ ಮೇಲೆ ಪ್ರೀತಿ, ನಂಬಿಕೆ, ವಿಶ್ವಾಸವನ್ನು ಇಟ್ಟುಕೊಂಡಿದ್ದರು. ನನಗೆ ಶಾಸಕ ಸ್ಥಾನದ ಜತೆಗೆ ನನ್ನ ತಂದೆಯ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಬಹು ದೊಡ್ಡ ಜವಾಬ್ದಾರಿಯಿದೆ. ಈ ಜವಾಬ್ದಾರಿಯನ್ನು ನಿಭಾಯಿಸಲು ನನ್ನ ತಂದೆ ದೈಹಿಕವಾಗಿ ನಮ್ಮನ್ನು ಅಗಲಿದ್ದರೂ ಬೆನ್ನಿಗೆ ನಿಂತು ಪ್ರೇರಕ ಶಕ್ತಿಯಾಗಿ ನಡೆಸಿಕೊಂಡು ಹೋಗುವಂತೆ ಭಾಸವಾಗುತ್ತಿದ್ದು, ಆದ್ದರಿಂದ ಅವರ ಅಭಿಮಾನಿಗಳ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.

ಮಾ.11 ರಂದು ನನ್ನ ತಂದೆ ಅಗಲಿ 1 ವರ್ಷ ಕಳೆಯುತ್ತಿದೆ. ಅವರ ಸೇವಾ ಮನೋಭಾವನೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮಾ.11ರಂದು ಚಾಮರಾಜನಗರ-ಮೈಸೂರು ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲಿ ಸೇವಾ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತದೆ, ಮಾ.12 ರಂದು ಸ್ವಗ್ರಾಮ ಹೆಗ್ಗವಾಡಿಯಲ್ಲಿ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ವೆಂಕಟೇಶ್, 8 ಕ್ಷೇತ್ರಗಳ ಶಾಸಕರು ಹಾಗೂ ತಂದೆಯ ಜತೆ ಒಡನಾಟ ಹೊಂದಿದ್ದ ಶಾಸಕರು, ಮಾಜಿ ಶಾಸಕರು, ಮಾಜಿ ಮಂತ್ರಿಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗಿಯಾಗಲಿದ್ದಾರೆ ಎಂದರು.

ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಅವರು ನನಗೆ ಅಚ್ಚುಮೆಚ್ಚಿನ ಸ್ನೇಹಿತರಾಗಿದ್ದರು. ಅವರು ಶ್ರಮಜೀವಿಗಳಾಗಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅವರ ಶ್ರಮ ಅಧಿಕ ಇದೆ ಎಂದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಚ್.ಸಿ.ಬಸವರಾಜು, ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠನಾಯಕ, ಹಾಡ್ಯ ರಂಗಸ್ವಾಮಿ, ವಿಧಾನಸಭಾ ಉಸ್ತುವಾರಿ ಹಿರೇಹಳ್ಳಿ ಸೋಮೇಶ್, ಮುಖಂಡರಾದ ಕಾವೇರಪ್ಪ, ಬಿ.ಕೆ.ರವಿಕುಮಾರ್, ಪ್ರದೀಪ್, ಕಳಲೆ ರಾಜೇಶ್, ಎಂ.ಮಾದಪ್ಪ, ಮುದ್ದಮಾದಶೆಟ್ಟಿ, ವಿಜಯ್‌ಕುಮಾರ್, ಶ್ರೀನಿವಾಸಮೂರ್ತಿ, ಎನ್.ಎಂ.ಮಂಜುನಾಥ್, ಕುಳ್ಳಯ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಜಿಪಂ ಮಾಜಿ ಸದಸ್ಯೆ ಲತಾಸಿದ್ದಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್‌ರಾಜ್, ನಗರಸಭಾ ಸದಸ್ಯ ಮಹೇಶ್, ಗಾಯತ್ರಿ, ಶ್ರೀಕಂಠಸ್ವಾಮಿ, ಕೆ.ಎಂ.ಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net