ಹೆದ್ದಾರಿಗಳಲ್ಲಿ ಅಪಘಾತ ತಡೆಗೆ ಕ್ರಮ

sp
Published on

ರಾಮನಗರ  : ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಪ್ಪಿಸುವ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಸೂಚನೆ ನೀಡಿದರು.

ಸೋಮವಾರ ತಮ್ಮ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಲೋಕೋಪಯೋಗಿ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಪೊಲೀಸ್ ಇಲಾಕೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಮತ್ತು ಬೆಂಗಳೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ದಶಪಥ ಹೆದ್ದಾರಿಗಳು ರಾಮನಗರದಲ್ಲಿ ಹಾದು ಹೋಗುತ್ತಿವೆ. ಇಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಇದರಿಂದ ಹೆಚ್ಚಿನ ಸಾರ್ವಜನಿಕರು ಸಾವು ನೋವಿಗೆ ಒಳಗಾಗುತ್ತಿದ್ದಾರೆ. ಇವುಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದರು.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ದಾಟುವ ಪ್ರಕ್ರಿಯೆ ಕಡಿಮೆ ಮಾಡಬೇಕು. ಅಪಘಾತ ಪ್ರದೇಶಗಳನ್ನು ಗುರುತಿಸಿ ಅಂತಹ ಕಡೆಗಳಲ್ಲಿ ತಡೆ ಬೇಲಿ ನಿರ್ಮಾಣ, ಸ್ಕೈವಾಕ್‌ಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಅತಿ ವೇಗದ ಚಾಲನೆಗೂ ಕಡಿವಾಣ ಹಾಕುವ ಅಗತ್ಯವಿದೆ.

ಇದೇ ರೀತಿ ಜಿಲ್ಲಾಮಟ್ಟದ ರಸ್ತೆಗಳನ್ನು ಅಪಘಾತ ರಹಿತ ರಸ್ತೆಗಳನ್ನಾಗಿ ಮಾಡಬೇಕಿದ್ದು, ಲೋಕೋಪಯೋಗಿ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಈ ಸಂಬಂಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಎಎಸ್‌ಪಿ ಸುರೇಶ್ ಸೇರಿ ಇತರೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net