12 ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ

Ambedkar_Townhall
Published on

ಮನುಸ್ಮೃತಿ ಸುಟ್ಟರು ಜಾತಿವ್ಯವಸ್ಥೆ ಬದಲಾಗಲಿಲ್ಲ !

ತುಮಕೂರು:  ನಗರದ ಟೌನ್‌ಹಾಲ್ ಮುಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾದ ಸಂವಿಧಾನಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 12 ಅಡಿ ಎತ್ತರದ ಕಂಚಿನ ಪ್ರತಿಮೆ  ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿ ಅಳವಡಿಸಲಾದ 'ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರ್' ಮಾದರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.‌ಜಿ.ಪರಮೇಶ್ವರ  ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತನಾಡಿದ ಪರಮೇಶ್ವರ, ಸ್ವಾತಂತ್ರ್ಯ ಬಂದಾಗಿನಿಂದ ಬಾಬಾ ಸಾಹೇಬ್‌ರ ಪ್ರತಿಮೆ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಮಹಾನಗರ ಪಾಲಿಕೆಯಲ್ಲಿ ಅನೇಕ ಬಾರಿ ನಿರ್ಧರಿಸಿದ್ದರು ಸಾಧ್ಯವಾಗಲಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಬಾಬಾ ಸಾಹೇಬ್ ಪ್ರತಿಮೆ ಇಡಲಾಗಿತ್ತು. ಬೆಂಗಳೂರಿಗೆ ಹತ್ತಿರವಿರುವ ತುಮಕೂರಿನಲ್ಲಿ ಇಡಲಾಗಿಲ್ಲ ಎಂಬ ಕೊರಗು ಇತ್ತು. ಪ್ರತಿಮೆ ಇಡಲು ಎಲ್ಲರು ಒಕ್ಕೊರಲಿನಿಂದ ಸಹಕರಿಸಿದರು‌.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡದೇ ಹೋಗಿದ್ದರೆ ಭಾರತ ಯಾವ ಸ್ಥಾನಮಾನದಲ್ಲಿ ಇರುತ್ತಿತ್ತು ಎಂಬುದು ಊಹಿಸಲು ಸಾಧ್ಯವಿಲ್ಲ‌‌. ಪ್ರತಿಯೊಬ್ಬ ಭಾರತೀಯನಿಗೆ ಸಮಾನತೆ ಸಿಗಬೇಕು. ಭ್ರಾತೃತ್ವ, ಸಹೋದರತ್ವದಿಂದ ಬಾಳಬೇಕು‌. ಈ ಎಲ್ಲ ವೈವಿದ್ಯಮಯವಾದ ಚಿಂತನೆಯಿಂದ ಸಂವಿಧಾನ ಕೊಟ್ಟಿದ್ದಾರೆ. ಯಾವುದೇ ರಾಜ್ಯದ ಅಧಿವೇಶನ, ಲೋಕಸಭೆ ಅಧಿವೇಶನ ನಡೆದರೂ ಬಾಬಾ ಸಾಹೇಬ್‌ರನ್ನು ನೆಪು ಮಾಡಿಕೊಳ್ಳದ ದಿನವೇ ಇಲ್ಲ‌. ಅಭಿಮಾನದಿಂದ ಸಂವಿಧಾನವನ್ನು ಜ್ಞಾಪಿಸಿಕೊಳ್ಳುತ್ತಾರೆ. ದೇಶ ಸದೃಡವಾಗಿ ಪ್ರಜಾಪ್ರಭುತ್ವವಾಗಿ ನಿಂತಿರುವುದಕ್ಕೆ ಸಂವಿಧಾನ ಕಾರಣ ಎಂದು ಸ್ಮರಿಸಿದರು.

ಮನುಸ್ಮೃತಿ ಸುಟ್ಟರು ಜಾತಿವ್ಯವಸ್ಥೆ ಬದಲಾಗಲಿಲ್ಲ ! ಈ ದೇಶದಲ್ಲಿ ಸಮಾನತೆ ಬರಬೇಕು. ಜಾತಿವ್ಯವಸ್ಥೆ ನಮ್ಮ ತಿನ್ನುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬ್‌ರು ಹಿಂದೂ ವಿರೋಧಿಯಲ್ಲ. ಹಿಂದೂ ಸಮಾಜವನ್ನು ಬದಲಾವಣೆ ಮಾಡಲು ಮುಂದಾದರು. ಮನುಸ್ಮೃತಿಯನ್ನು ಸುಟ್ಟರು. ಆದರು ಬದಲಾವಣೆ ಆಗಲಿಲ್ಲ. ಜಾತಿವ್ಯವಸ್ಥೆ, ಸಮಾಜ ಬದಲಾಗಲಿಲ್ಲ. ಇದರಿಂದ ಮನನೊಂದು, 'ಆಕಸ್ಮಿಕವಾಗಿ ಹಿಂದೂವಾಗಿ ಹುಟ್ಟಿದ್ದೇನೆ. ಹಿಂದೂವಾಗಿ ಸಾಯಲಾರೇ' ಎನ್ನುತ್ತಾರೆ. ಸಹೋದರತ್ವ ಭಾವನೆ ಬರಲಿಲ್ಲವಲ್ಲ ಎಂದು ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಪರಮೇಶ್ವರ ಹೇಳಿದರು.

ಒಂದು ಕಾಲಕ್ಕೆ ಬಡತನದ ದೇಶವಾಗಿದ್ದ ಭಾರತ, ಇಂದು ವಿಶ್ವದಲ್ಲಿ 4ನೇ ಅರ್ಥಿಕ ದೇಶವಾಗಿ ಬೆಳೆದಿರುವುದಕ್ಕೆ ಸಂವಿಧಾನ ಕಾರಣ. ರಿಸರ್ವ್ ಬ್ಯಾಂಕ್ ಇಲ್ಲವಾಗಿದ್ದರೆ ನಮ್ಮ ಅರ್ಥಿಕ ಮಟ್ಟ ಏನಾಗಿರುತ್ತಿತ್ತು ಎಂದು ಊಹಿಸಲು ಅಸಾಧ್ಯ. ಪ್ರಸ್ತುತ ಸಂದರ್ಭದಲ್ಲಿ ಬದಲಾವಣೆ ಆಗುತ್ತಿವೆ. ವಿದ್ಯಾವಂತರಾಗುತ್ತಿದ್ದಾರೆ ಮನಸ್ಸು ಬದಲಾಗುತ್ತಿಲ್ಲ. ಸಮಾಜ ಅರ್ಥ ಮಾಡಿಕೊಳ್ಳಬೇಕು‌. ಇಲ್ಲವಾದರೆ ಹೀಗೆ ಉಳಿದುಬಿಡುತ್ತೇವೆ. ಬದಲಾವಣೆ ಎಂಬುದು ಸಂವಿಧಾನದ ಪುಟದಲ್ಲಿ ಇದ್ದರೆ ಸಾಲದು ಎಂದರು.

ಸರ್ಕಾರಗಳು ನೀಡುವ ಎಲ್ಲ ಯೋಜನೆ, ಸವಲತ್ತುಗಳು ಬದಲಾವಣೆ ತರಲೇ ಇಲ್ಲ. ಮಹದೇವಪ್ಪ ಅವರು ಅನೇಕ ಬದಲಾವಣೆ ತಂದಿದ್ದಾರೆ. ಸಂವಿಧಾನದ‌ಪೂರ್ವಪೀಠಿಕೆಯನ್ನು ಮನೆಮನೆಗೆ ತಲುಪಿಸಿ ಅರ್ಥ ಮಾಡಿಸುವ ಕೆಲಸ ಮಾಡಿದ್ದಾರೆ.‌ ಇದೇ ನಮ್ಮ ಬೈಬಲ್, ಕುರಾನ್ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಯಾವ ಜನ ಹಿಂದುಳಿದಿದ್ದಾರೆ. ಅವರಿಗೆ ಕಾರ್ಯಕ್ರಮ ಕೊಟ್ಟು ಸಮಾಜದ ಮುನ್ನೆಲೆಗೆ ತರುತ್ತೇವೆ ಎಂದು ಮುಖ್ಯಂಮತ್ರಿಯವರು ತಿಳಿಸಿದ್ದಾರೆ.

ಕೇಂದ್ರ ಸಚಿವ ವಿ.ಸೋಮಣ್ಣ,  ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಡಾ. ಹೆಚ್.ಡಿ.ರಂಗನಾಥ್, ಹೆಚ್.ವಿ.ವೆಂಕಟೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net