

ಉಪ್ಪಿನಬೆಟಗೇರಿ: ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಮುಂದೆ ಗಣೇಶ ಚತುರ್ಥಿ ಅಂಗವಾಗಿ ಹನುಮಾನ ಯುವಕ ಮಂಡಳದವರು 8ನೇ ಬಾರಿಗೆ 12 ಅಡಿ ಎತ್ತರದ ಬೆಟಗೇರಿ ಕಾ ರಾಜಾ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಾರ್ಕೆಟ್ ರಸ್ತೆಯ ಶ್ರೀ ಆಂಜನೇಯ ದೇವಸ್ಥಾನದ ಮುಂದೆ 2016 ರಲ್ಲಿ ಮೊದಲ ಬಾರಿಗೆ ಶ್ರೀ ಹನುಮಾನ ಯುವಕ ಮಂಡಳ ರಾಮನಗರದ ಯುವ ಮುಖಂಡ ರಾಹುಲ್ ಅಷ್ಟಗಿ ಹಾಗೂ ಮಂಜುನಾಥ ನವಲಗುಂದ ನೇತೃತ್ವದಲ್ಲಿ ಶ್ರೀ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ನಂತರ ಯುವ ಪಡೆಯು ಬಸವ ಸೇನೆ ಎಂಬ ಸಂಘಟನೆಯನ್ನು ಹುಟ್ಟು ಹಾಕಿದರು.
ಹುಬ್ಬಳ್ಳಿ- ಧಾರವಾಡದಲ್ಲಿ ಸಾರ್ವಜನಿಕವಾಗಿ ಹಬ್ಬ ಆಚರಿಸುವ ರೀತಿಯಲ್ಲಿ ಗಣೇಶ ಹಬ್ಬ ಆಚರಿಸಲು ಮುಂದಾದರು. ಆದರೆ, ಗಣೇಶ ಮೂರ್ತಿ ಸೇರಿ ಏಳು ದಿನಗಳವರೆಗೆ ನಡೆಯುವ ಈ ಕಾರ್ಯಕ್ರಮದ ಖರ್ಚು ವೆಚ್ಚದ ಚರ್ಚೆ ನಡೆದಾಗ ಆಗ ಗ್ರಾಪಂ ಅಧ್ಯಕ್ಷರಾಗಿದ್ದ ಮಹಾವೀರ ಅಷ್ಟಗಿ ಹಾಗೂ ಸದಸ್ಯ ರೇವಣಸಿದ್ದಪ್ಪ ನವಲಗುಂದ ಕೊಲ್ಲಾಪುರದಿಂದ 14 ಅಡಿ ಎತ್ತರದ ಗಣೇಶ ಮೂರ್ತಿ ಕೊಡಿಸಿದ್ದರು.
ಹಬ್ಬದಂಗವಾಗಿ ಸೆ. 23 ರಂದು ಮಧ್ಯಾಹ್ನ ರಂಗೋಲಿ ಸ್ಪರ್ಧೆ, ನಂತರ ವಿವಿಧ ಕ್ಷೇತ್ರದ 20 ಜನರಿಗೆ ಸನ್ಮಾನ ಜರುಗಲಿದೆ. ಸಂಜೆ ಅನ್ನ ಸಂತರ್ಪಣೆ ನಡೆಯಲಿದೆ. ಸೆ. 24ರಂದು ಮಧ್ಯಾಹ್ನ 12 ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದೆ.
ಎಂಟು ವರ್ಷಗಳಿಂದ ಆಂಜನೇಯ ದೇವಸ್ಥಾನದ ಮುಂದೆ ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದೇವೆ. ಜತೆಗೆ ರಾಷ್ಟ್ರೀಯ ಹಬ್ಬಗಳ ಪ್ರಾಮುಖ್ಯತೆಯ ಅರಿವು ಮೂಡಿಸಲು ಹಲವು ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.| ಗಂಗಾಧರ ಪಟ್ಟಣಶೆಟ್ಟಿ ಹನುಮಾನ ಯುವಕ ಮಂಡಳಿ ಸದಸ್ಯ