

ನುಗ್ಗೇಹಳ್ಳಿ: ನುಗ್ಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ 12.16 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಶುಕ್ರವಾರ ತಿಳಿಸಿದರು.
ಹೋಬಳಿ ಕೇಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 128 ರೈತರಿಗೆ 37 ಲಕ್ಷ ರೂ. ಸಾಲ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಹಾಸನ ಜಿಲ್ಲಾ ಬ್ಯಾಂಕ್ ನಲ್ಲಿ 1600 ಕೋಟಿ ರೂ. ಠೇವಣಿ ಇಡಲಾಗಿದೆ. 1250 ಕೋಟಿ ರೂ.ಗಳನ್ನು ರೈತರಿಗೆ ಸಾಲ ನೀಡಲಾಗಿದೆ. ಜಿಲ್ಲಾ ಬ್ಯಾಂಕ್ ನಷ್ಟದಲ್ಲಿದ್ದಾಗ ದೇವೇಗೌಡರು ಸಹಕಾರ ಸಚಿವರಾಗಿದ್ದ ಜಾಲಪ್ಪ ಅವರಿಂದ ಪೈಲಟ್ ಯೋಜನೆ ಮೂಲಕ 2 ಕೋಟಿ ರೂ. ಬಿಡುಗಡೆ ಮಾಡಿಸಿದ್ದರು ಎಂದರು.
ಪ್ರಾಥಮಿಕ ಸಹಕಾರ ಸಂಘದ ಗೋದಾಮು ನಿರ್ಮಾಣಕ್ಕೆ ನಬಾರ್ಡ್ ನಿಂದ 25 ಲಕ್ಷ ರೂ. ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.
ನುಗ್ಗೇಹಳ್ಳಿ ಕೆರೆ ತುಂಬಿಸಲು ಕಾಲುವೆ ಸೋಸಲು ಇಟಾಚಿ ತರಿಸಲಾಗಿದೆ. 6 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಈ ಹಂಗಾಮಿನಲ್ಲಿ ನುಗ್ಗೇಹಳ್ಳಿ ಕೆರೆ ತಾವರೆಕೆರೆ, ಜಂಬೂರು, ಈ ಯೋಜನೆಯ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು ಎಂದರು.
ಚಂದ್ರಮೌಳೇಶ್ವರ ದೇವಾಲಯದ ಹಿಂಭಾಗದ ಸಮುದಾಯ ಭವನ ನವೀಕರಣಕ್ಕೆ ಹಣ ಬಿಡುಗಡೆ ಮಾಡಿಸುತ್ತೇನೆ. ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಒಗಳು ಕುಡಿಯುವ ನೀರಿನ ಟ್ಯಾಂಕುಗಳು, ಚರಂಡಿಗಳನ್ನು ಸ್ವಚ್ಛಗೊಳಿಸಿ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚನೆ ನೀಡಿದರು. ರೈತರ ಕೊಬ್ಬರಿಗೆ ನಫೆಡ್ ಮೂಲಕ ಬರಬೇಕಾದ ಬಾಕಿ ಹಣ ಬಿಡುಗಡೆ ಮಾಡಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ. ರಂಗಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲ್ ಕುಮಾರ್, ಮೇಲ್ವಿಚಾರಕ ಅಭಿಲಾಶ್, ಕಾರ್ಯನಿರ್ವಹಣಾಧಿಕಾರಿ ಡಿ. ವಿನಯ್, ಮುಖಂಡರಾದ ತೋಟಿ ನಾಗರಾಜ್, ದೊರೆಸ್ವಾಮಿ, ಬೆಳಗಳ್ಳಿ ಪುಟ್ಟಸ್ವಾಮಿ, ಮಂಜುನಾಥ್, ಉಪಾಧ್ಯಕ್ಷೇ ಮಾಯಮ್ಮ, ಸದಸ್ಯರುಗಳಾದ ಸಂಪತ್ ಕುಮಾರ್, ಪಟೇಲ್ ಕುಮಾರ್, ವಿಕ್ಟರ್, ತೋಪೇಗೌಡ, ಚಂದ್ರು, ಮಹೇಶ್, ಪ್ರಕಾಶ್, ಕೃಷ್ಣೇಗೌಡ, ಕಾರ್ಯದರ್ಶಿ ರುದ್ರೇಶ್, ಮಂಗಳಮ್ಮ, ಇತರರು ಹಾಜರಿದ್ದರು.