

ಬೆಂಗಳೂರು: ಭಾರತೀಯ ಅಂಚೆ ಇಲಾಖೆ 11ರವರೆಗೆ 'ರಾಷ್ಟ್ರೀಯ ಅಂಚೆ ಸಪ್ತಾಹ' ಆಚರಿಸುತ್ತಿದೆ. 'ಟಪಾಲುಗಳು ಮತ್ತು ಪಾರ್ಸೆಲ್' ದಿನದ ಹಿನ್ನೆಲೆ ಬೆಂಗಳೂರು ಜನರಲ್ ಅಂಚೆ ಕಚೇರಿ (ಜಿಪಿಒ) ವತಿಯಿಂದ ಸೋಮವಾರ ನಗರದ ಹೋಟೆಲ್ನಲ್ಲಿ 'ಗ್ರಾಹಕರ ಭೇಟಿ' (ಕಸ್ಟಮರ್ ಮೀಟ್) ಕಾರ್ಯಕ್ರಮ ಆಯೋಜಿಸಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಗ್ರಾಹಕರು, ಅಂಚೆ ಇಲಾಖೆಗೆ ಅಗತ್ಯ ಸಲಹೆಗಳನ್ನು ನೀಡಿದರು. ಇಲಾಖೆಯ ಗುಣಮಟ್ಟದ ಸೇವೆ ಗ್ರಾಹಕರ ವಿಶ್ವಾಸಕ್ಕೆ ಕಾರಣವಾಗಿದೆ. ಕೊರಿಯರ್ ವಿಭಾಗದ ಕಾರ್ಯವ್ಯಾಪ್ತಿ ವಿಸ್ತಾರವಾಗುತ್ತಿದೆ. ಪ್ರಸ್ತುತ 110 ದೇಶಗಳಿಗೆ ಪಾರ್ಸೆಲ್ ಕಳುಹಿಸುತ್ತಿದ್ದೇವೆ ಎಂದು ಅಂಚೆ ಇಲಾಖೆ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಎಸ್. ರಾಜೇಂದ್ರಕುಮಾರ್ ತಿಳಿಸಿದರು.
ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಬಳಸಿಕೊಂಡು ಅಂಚೆ ಸೇವೆ ಉನ್ನತಿಕರಿಸಲಾಗುತ್ತಿದೆ. ಸಂಪರ್ಕ ವ್ಯಾಪ್ತಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ಒಂದು ವರ್ಷದಲ್ಲಿ ಐಟಿ ಕಾರಿಡಾರ್ ಹಾಗೂ ಜನಸಂಖ್ಯೆ ಆಧರಿಸಿ ಪ್ರಮುಖ ಸ್ಥಳಗಳಲ್ಲಿ "ಪಾರ್ಸೆಲ್ ಡೆಲಿವರಿ ಬಾಕ್ಸ್'ಗಳನ್ನು ಅಳವಡಿಸಲು ಉದ್ದೇಶಿಸಿದ್ದೇವೆ. ಮುಖ್ಯವಾಗಿ ಗುಣಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಅಂಚೆ ಇಲಾಖೆ ಮಾಡುತ್ತಿದೆ ಎಂದರು. ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸ್ಪೀಡ್ ಪೋಸ್ಟ್ ಒಪ್ಪಂದ ಮಾಡಿಕೊಂಡಿದ್ದೇವೆ. ಮುಖ್ಯವಾಗಿ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿ ಜತೆ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ಬೇಳುಕಾಳುಗಳು ಹಾಗೂ ಬೀಜಗಳನ್ನು ರೈತರ ಮನೆಬಾಗಿಲಿಗೆ ತಲುಪಿಸಲು ಸಾಧ್ಯವಾಗಲಿದೆ. ಯೋಜನೆಗೆ ಶ್ರೀದಲ್ಲಿ ಚಾಲನೆ ಸಿಗಲಿದೆ. ರಾಜ್ಯ ಬೀಜ ನಿಗಮ ನಿಯಮಿತದೊಂದಿಗೆ 'ಬಿಜಿನೆಸ್ ಪಾರ್ಸೆಲ್' ಒಪ್ಪಂದ ಮಾಡಲಾಗಿದೆ. ಇದರಿಂದ ರೈತರಿಗೆ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟ ಮಾಡಲು ಸಾಧ್ಯವಾಗುತ್ತಿದೆ. ಕಳೆದ ಐದು ವರ್ಷದಲ್ಲಿ 350 ಟನ್ ಮಾವು ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.
8ರಂದು 'ಅಂಚೆ ಚೀಟಿಗಳ ಸಂಗ್ರಹ ದಿನ', 9ರಂದು 'ವಿಶ್ವ ಅಂಚೆ ದಿನ', 10ರಂದು 'ಅಂತ್ಯೋದಯ ದಿವಸ್' ಮತ್ತು 11ರಂದು 'ವಿಟ್ಟಿಯ ಸಶಕ್ತೀಕರಣ ದಿವಸ್' ಆಚರಿಸಲಾಗುತ್ತಿದೆ.