

ಯಳಂದೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಫೆ. 11ರಂದು ಕರ್ನಾಟಕ ಪಬ್ಲಿಕ್ ಶಾಲೆ ವತಿಯಿಂದ ಕೆಪಿಎಸ್-ಫೆಸ್ಟ್-02 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ ತಿಳಿಸಿದರು.
ಈ ಸಂಬಂಧ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕೆಪಿಎಸ್ _ಫೆಸ್ಟ್-02 ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಮ್ಮ ಶಾಲೆ ಖಾಸಗಿ ಶಾಲೆಯಂತೆ ಉತ್ತಮ ಕಾರ್ಯಕ್ರಮ ನಡೆಸಲು ಹಲವು ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದು, ಅದರಲ್ಲಿ ನಾವು ಯಶಸ್ಸನ್ನೂ ಪಡೆದಿದ್ದೇವೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಕ್ರೀಡೆ, ಚಿತ್ರಕಲೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ನೀಡಲು ನಮ್ಮ ಸಿಬ್ಬಂದಿ ಶ್ರಮ ಮೀರಿ ಪ್ರಯತ್ನಿಸುತ್ತಿದೆ. ಇಡೀ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಬೋರ್ಡ್ ವತಿಯಿಂದ ನಡೆದ ಚಿತ್ರಕಲಾ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಪಾಸಾದ ಜಿಲ್ಲೆಯ ಏಕೈಕ ವಿದ್ಯಾರ್ಥಿ ನಮ್ಮ ಶಾಲೆಯವನೇ ಆಗಿದ್ದಾನೆ ಎಂಬುದಕ್ಕೆ ನಮಗೆ ಹೆಮ್ಮೆ ಇದೆ. ನಮ್ಮ ಶಾಲೆಯಲ್ಲಿ ಎನ್‌ಎಸ್‌ಕ್ಯೂಎಫ್ ಶಿಕ್ಷಕರು ಇದ್ದಾರೆ. ಈ ಶಿಕ್ಷಣ ಅಳವಡಿಸಿಕೊಂಡ ಜಿಲ್ಲೆಯ ಪ್ರಥಮ ಶಾಲೆ ನಮ್ಮದಾಗಿದೆ. ಇದರಲ್ಲಿ ಮಕ್ಕಳಲ್ಲಿರು ವೃತ್ತಿ ಕುಶಲತೆಯನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಗುತ್ತಿದ್ದು, ನಮ್ಮಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್ ತರಬೇತಿಯನ್ನು 9 ಮತ್ತು 10 ನೇ ತರಗತಿಯ 25 ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
ಶಾಲೆಯ ನೂತನ ಕಟ್ಟಡ ನಿರ್ಮಾಣಗೊಂಡಿದ್ದು ಇದರ ಉದ್ಘಾಟನೆಗೆ ನಾವು ಕಾತರರಾಗಿದ್ದೇವೆ. ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಒಂದು ಸುಸಜ್ಜಿತ ಗ್ರಂಥಾಲಯ ಮಾಡುವ ಉದ್ದೇಶ ಇದೆ. ಇದಕ್ಕೆ ಪ್ರಯತ್ನಗಳು ನಡೆದಿವೆ. ಇದರೊಂದಿಗೆ ಇಲ್ಲಿಗೆ ಒಂದು ವಿಜ್ಞಾನದ ಲ್ಯಾಬ್, ಒಂದು ಹೈಟೆಕ್ ಕಂಪ್ಯೂಟರ್ ಲ್ಯಾಬ್ ನಿರ್ಮಿಸಲು ಈಗಾಗಲೇ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಫೆ.11ರಂದು ನಡೆಯಲಿರುವ ಕಾರ್ಯಕ್ರಮವನ್ನು ಮಧ್ಯಾಹ್ನ 2 ಗಂಟೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಲಿದ್ದು ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ವರ್ಗ, ಪಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪುಟ್ಟಸಿದ್ದಮ್ಮ ಶಿಕ್ಷಕರಾದ ಪುಟ್ಟಸ್ವಾಮಿ, ತ್ರಿವೇಣಿ, ಮಹೇಶ್, ರೋಹಿಣಿ, ಮಂಜುಳಾ, ಗೀತಾ, ಮಹೇಶ್‌ಕುಮಾರ್, ಆಶಾ, ಸುಧಾ, ಸೌಭಾಗ್ಯಾ, ಕುಮುದಾ, ಮಧುರಾಣಿ, ಪುಷ್ಪಲತಾ, ಜಿ.ವಿಜಯ, ನಂಜುಂಡಸ್ವಾಮಿ, ಶೀಧರ್, ಸವಿತಾಕುಮಾರಿ, ಭಾಗ್ಯಶ್ರೀ, ಪವನ್‌ಕುಮಾರ್, ಹೇಮಂತ್ ಇದ್ದರು.