

ವಿಜಯವಾಣಿ ಸುದ್ದಿಜಾಲ ಕಾರವಾರ
ಜಿಲ್ಲೆಯಲ್ಲಿ ಗುರುವಾರ 11 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 167 ತಲುಪಿದೆ. ಮುಂಡಗೋಡಿನ ಮೂವರು, ಹಳಿಯಾಳದ ಇಬ್ಬರು, ಯಲ್ಲಾಪುರ, ಭಟ್ಕಳ, ಶಿರಸಿ, ದಾಂಡೇಲಿ, ಜೊಯಿಡಾ, ಹೊನ್ನಾವರದ ತಲಾ ಒಬ್ಬರಲ್ಲಿ ಸೋಂಕು ಕಂಡುಬಂದಿದೆ.
ಯೋಧನಿಗೆ ಸೋಂಕು: ದೆಹಲಿಯಿಂದ ಜೂನ್ 21 ರಂದು ವಾಪಸಾಗಿ ಹೋಟೆಲ್ ಕ್ವಾರಂಟೈನ್ನಲ್ಲಿದ್ದ 50 ವರ್ಷದ ಸಿಆರ್ಪಿಎಫ್ ಎಎಸ್ಐಗೆ (ಯುಕೆ-158)ಸೋಂಕು ಇರುವುದು ಖಚಿತವಾಗಿದೆ. ಗೋವಾಕ್ಕೆ ವಿಮಾನದಲ್ಲಿ ಬಂದಿಳಿದಿದ್ದ ಯೋಧ ಅಲ್ಲಿಂದ ಹುಬ್ಬಳ್ಳಿ ಹಾಗೂ ದಾಂಡೇಲಿಗೆ ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
3 ವರ್ಷದ ಮಗುವಿಗೆ ದೃಢ: ತಂದೆ ತಾಯಿಯ ಜತೆ ಭಟ್ಕಳಕ್ಕೆ ಬಂದಿಳಿದು ಕ್ವಾರಂಟೈನ್ನಲ್ಲಿದ್ದ 3 ವರ್ಷದ ಹೆಣ್ಣು ಮಗುವಿಗೆ ಸೋಂಕು ಖಚಿತವಾಗಿದೆ. ಆಕೆಯ ಜತೆ ಈಗ ಸೋಂಕು ಇಲ್ಲದ ತಾಯಿಯೂ ಆಸ್ಪತ್ರೆಗೆ ಬರುವ ಅನಿವಾರ್ಯತೆ ಇದೆ.
ಇನ್ನು ಕುವೈತ್ನಿಂದ ಆಗಮಿಸಿದ ಭಟ್ಕಳದಲ್ಲಿ ಹೋಟೆಲ್ ಕ್ವಾರಂಟೈನ್ ಮುಗಿಸಿ ಯಲ್ಲಾಪುರ ನೂತನ ನಗರದ ತನ್ನ ಮನೆಗೆ ತೆರಳಿದ್ದ 29 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢವಾಗಿದೆ.
ದೆಹಲಿಯಿಂದ ಶಿರಸಿ ಕಸ್ತೂರಬಾ ನಗರಕ್ಕೆ ಆಗಮಿಸಿದ 55 ವರ್ಷದ ಪುರುಷ, ಮುಂಬೈನಿಂದ ಹಳಿಯಾಳ ಬಾಳಶೆಟ್ಟಿಕೊಪ್ಪಕ್ಕೆ ಆಗಮಿಸಿದ 23 ಹಾಗೂ 25 ವರ್ಷದ ಇಬ್ಬರು ಮಹಿಳೆಯರು, ಜೊಯಿಡಾ ಜಗಲಬೇಟಕ್ಕೆ ಆಗಮಿಸಿದ 53 ವರ್ಷದ ಪುರುಷ, ಹೊನ್ನಾವರ ಮಾವಿನಕುರ್ವಾಕ್ಕೆ ಆಗಮಿಸಿದ 28 ವರ್ಷದ ವ್ಯಕ್ತಿಗೆ ಸೋಂಕು ಇರುವುದು ಕಂಡುಬಂದಿದೆ.
ಡೆಹರಾಡೂನ್ನಿಂದ ಬಂದ ಬಾಲಕಿಗೆ ಪಾಸಿಟಿವ್: ಮುಂಡಗೋಡ ತಾಲೂಕಿನ ಟಿಬೆಟಿಯನ್ ಕಾಲನಿಯ ಮೂವರಿಗೆ ಕರೊನಾ ಸೋಂಕು ಗುರುವಾರ ದೃಢಪಟ್ಟಿದೆ. ಟಿಸಿವಿ ಹಾಸ್ಟೆಲ್ನ ಕ್ವಾರಂಟೈನ್ನಲ್ಲಿದ್ದವರಿಗೆ ಅಡುಗೆ ಮಾಡುತ್ತಿದ್ದ 32 ವರ್ಷದ ಟಿಬೆಟಿಯನ್ ವ್ಯಕ್ತಿಗೆ, ಧರ್ಮಶಾಲೆಯಿಂದ ಬಂದ 27 ವರ್ಷದ ಯುವಕ, ಡೆಹರಾಡೂನ್ನಿಂದ ಬಂದಿದ್ದ 16 ವರ್ಷದ ಬಾಲಕಿಗೆ ಕರೊನಾ ಪಾಸಿಟಿವ್ ವರದಿ ಬಂದಿದೆ. ಇವರು ಕ್ವಾರಂಟೈನ್ನಲ್ಲಿದ್ದರು. ಪಾಸಿಟಿವ್ ಬಂದವರನ್ನು ಕಾರವಾರದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆ ದೆಹಲಿಯಿಂದ ಬಂದ ವ್ಯಕ್ತಿಗೆ ಜೂ.16ರಂದು ಸೋಂಕು ದೃಢಪಟ್ಟಿತ್ತು. ಪ್ರಾಥಮಿಕ ಸಂಪರ್ಕದಲ್ಲಿದ್ದ ಅಡುಗೆ ಸಹಾಯಕಿಗೆ ಬುಧವಾರ ಕರೊನಾ ಪಾಸಿಟಿವ್ ಬಂದಿತ್ತು.
ತಹಸೀಲ್ದಾರ್ ಭೇಟಿ: ಟಿಬೆಟಿಯನ್ ಕಾಲನಿಯ ಟಿಸಿವಿ ಹಾಸ್ಟೆಲ್ ಕ್ವಾರಂಟೈನ್ ಕೇಂದ್ರಕ್ಕೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ತಾಲೂಕು ವೈದ್ಯಾಧಿಕಾರಿ ಎಚ್.ಎಫ್. ಇಂಗಳೆ ಮತ್ತು ಟಿಬೆಟಿಯನ್ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ದರು. ಈ ವೇಳೆ ಮಾತನಾಡಿದ ತಹಸೀಲ್ದಾರ್, ‘ಹಾಸ್ಟೆಲ್ ಕ್ವಾರಂಟೈನ್ನಲ್ಲಿ ಒಟ್ಟು 73 ಜನ ಟಿಬೆಟಿಯನ್ನರು ಇದ್ದಾರೆ. ಇವರೆಲ್ಲರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಮೂರು ಪ್ರಕರಣಗಳು ಪತ್ತೆಯಾದ ಕಾರಣ ಟಿಬೆಟಿಯನ್ ಮುಖಂಡರ ಜೊತೆ ಸಭೆ ನಡೆಸಿ ಕಟ್ಟುನಿಟ್ಟಾಗಿ ಸರ್ಕಾರದ ನಿಯಮ ಪಾಲನೆ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.