

ಉಪ್ಪಿನಂಗಡಿ: ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿ ಸಹಕಾರ ಭಾರತಿಯ ಎಲ್ಲ 11ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಸಹಕಾರ ಭಾರತಿಯ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದರಿಂದ ಎಲ್ಲ ಹನ್ನೆರಡೂ ಸ್ಥಾನಗಳು ಸಹಕಾರ ಭಾರತಿಗೆ ಒಲಿದಂತಾಗಿದೆ.
ಪ್ರಸಕ್ತ ಸಾಲಿನ ಅಧ್ಯಕ್ಷ ಕೆ.ವಿ. ಪ್ರಸಾದ್ ಸಂಘಟನೆಯ ತೀರ್ಮಾನದಂತೆ ಸ್ಪರ್ಧೆ ಅವಕಾಶ ವಂಚಿತರಾಗಿದ್ದರು. ಇದರಿಂದ ಆಕ್ರೋಶಗೊಂಡ ಅವರು ಬಂಡಾಯವೆದ್ದು ಚುನಾವಣೆಗೆ ಸ್ಪರ್ಧಿಸಿದ ಕಾರಣ ಚುನಾವಣಾ ಕಣ ರಂಗೇರಿತ್ತು.
ಕೃಷಿ ಸಾಲಗಾರರ ಸಾಮಾನ್ಯ ಸ್ಥಾನದಲ್ಲಿ ಸ್ಪರ್ಧಿಸಿದ ವಸಂತ ಪಿ., ಶ್ರೀರಾಮ ಪಾತಾಳ, ಸದಾನಂದ ಶೆಟ್ಟಿ ಜಿ., ಸುಬ್ರಹ್ಮಣ್ಯ ಅಗರ್ತ, ಮಹಿಳಾ ಮೀಸಲು ಕ್ಷೇತ್ರದಿಂದ ಉಷಾ ಮುಳಿಯ, ಸಂಧ್ಯಾ, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಸುನೀಲ್ ದಡ್ಡು, ಹಿಂದುಳಿದ ವರ್ಗ ಬಿ.ಮೀಸಲು ಕ್ಷೇತ್ರದಿಂದ ದಯಾನಂದ ಸರೋಳಿ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸುಂದರ ಕೆ., ಪರಿಶಿಷ್ಟ ಪಂಗಡ ಕ್ಷೇತ್ರದಿಂದ ರಾಘವ ನಾಯ್ಕ, ಕೃಷಿಯೇತರ ಸಾಲಗಾರರ ಕ್ಷೇತ್ರದಿಂದ ರಾಜೇಶ್ ಮುಖಾರಿ ಜಯ ಗಳಿಸಿದರು. ಸಾಲಗಾರರಲ್ಲದ ಮತಕ್ಷೇತ್ರದಿಂದ ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದರು.