7 ಲಕ್ಷ ಮೌಲ್ಯದ 11 ಬೈಕ್‌ಗಳ ವಶ

13 KKP 5
Published on


ಕನಕಪುರ: ಕಾನೂನು ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರು ಕದ್ದ 7 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 


ನಗರದ ಕರಡಿಗುಡ್ಡೆ ಶಂಕರ್ ಎಂಬುವರ ಮನೆಮುಂದೆ ನಿಲ್ಲಿಸಿದ್ದ ಬೈಕ್‌ನ್ನು ಹಾಡಹಗಲೇ ಕದ್ದು ಪರಾರಿಯಾಗಿದ್ದರು. ಇತ್ತೀಚೆಗೆ ಮೋಟಾರ್ ಬೈಕ್ ಕಳ್ಳತನ ಸುದ್ದಿ ಹೆಚ್ಚಾದ ಹಿನ್ನೆಲೆಯಲ್ಲಿ ಕಳ್ಳರನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿತ್ತು. ಮಹಾರಾಜರಕಟ್ಟೆ ಬೈಪಾಸ್ ರಸ್ತೆಯಲ್ಲಿ ಮೂವರು ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ತೆರಳುತ್ತಿದ್ದ ವೇಳೆ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವುದು ಬಯಲಾಗಿದೆ. 


ನಗರ ಠಾಣಾ ವ್ಯಾಪ್ತಿಯಲ್ಲಿ 4, ಗ್ರಾಮಾಂತರ ಠಾಣೆಯಲ್ಲಿ 3, ಬೆಂಗಳೂರು ಎಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1, ಬೆಂಗಳೂರು ವಿವಿಧೆಡೆ 2 ವಾಹನಗಳನ್ನು ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಕಳವು ಬೈಕ್‌ಗಳನ್ನು ಕನಕಪುರ ಬೈಪಾಸ್ ರಸ್ತೆಯ ಮುನೇಶ್ವರಸ್ವಾಮಿ ದೇವಾಲಯದ ಸಮೀಪ ಬಚ್ಚಿಟ್ಟಿದ್ದರು.

ವಿಚಾರಣೆ ವೇಳೆ ಬೆಳಕಿಗೆ ಬಂದ ಹನ್ನೊಂದು ವಾಹನಗಳನ್ನು ವಶಕ್ಕೆ ಪಡೆದು, ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ಬೆಂಗಳೂರು ಮಡಿವಾಳದ ಬಾಲನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಪರಿವೀಕ್ಷಣಾಲಯ ವಶಕ್ಕೆ ನೀಡಲಾಗಿದೆ. ಸರ್ಕಲ್‌ಇನ್‌ಸ್ಪೆಕ್ಟರ್ ಮಿಥುನ್‌ಶಿಲ್ಪಿ, ಉಪನಿರೀಕ್ಷಕರಾದ ಉಷಾನಂದಿನಿ, ರತ್ನಮ್ಮ, ಎಎಸ್‌ಐ ವೆಂಕಟೇಗೌಡ, ಮುಖ್ಯ ಪೇದೆಗಳಾದ ಶಿವಶಂಕರ್, ರಮೇಶ್, ಮನು, ಅನಂತಕುಮಾರ್, ರವಿ, ಶಿವರಾಜು, ವಾಹನ ಚಾಲಕ ಶಂಕರ್‌ಲಿಂಗಯ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net