

ಕೆ.ಆರ್.ಪೇಟೆ: ಪಟ್ಟಣದ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನಾ ಭವನದಲ್ಲಿ ಆಯೋಜಿಸಿದ್ದ ಪುರಸಭೆಯ ಸಭೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿ ಒಪ್ಪಿಗೆ ಪಡೆಯಲಾಯಿತು.
ಒಟ್ಟು ನಿರೀಕ್ಷಿತ 14,12,36,661 ರೂ. ಆದಾಯದಲ್ಲಿ 14,73,564 ರೂ. ಖರ್ಚನ್ನು ಅಂದಾಜಿಸಲಾಗಿದ್ದು, 11,63,097 ರೂ. ಉಳಿತಾಯ ಬಜೆಟ್ ಅನ್ನು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್ ಮಂಡಿಸಿದರು.
ಶಾಸಕ ಎಚ್.ಟಿ.ಮಂಜು, ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜೆ.ಬಿ.ಮಾರುತಿ, ಮುಖ್ಯಾಧಿಕಾರಿ ಬಿ.ಜಿ.ಸತೀಶ್ ಸಭೆಯಲ್ಲಿ ಹಾಜರಿದ್ದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಕೆ.ಆರ್.ಪೇಟೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸದಸ್ಯರು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಚುನಾವಣೆಯ ಸಂದರ್ಭ ಬಂದಾಗ ರಾಜಕಾರಣ ಮಾಡೋಣ, ಉಳಿದಂತೆ ಪಟ್ಟಣದ ಅಭಿವೃದ್ಧಿಗೆ ನಾವೆಲ್ಲರೂ ಪಕ್ಷ ಭೇದವಿಲ್ಲದೆ ಎಲ್ಲರೂ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆ ನೀಡಿ ಕೆಲಸ ಮಾಡಬೇಕು ಎಂದರು.
ಶಾಸಕರು ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಯಲು ರಂಗಮಂದಿರ ನಿರ್ಮಾಣ ಕಾಮಗಾರಿಗೆ ಶಾಸಕರ ಅನುದಾನದಲ್ಲಿ 10ಲಕ್ಷ ರೂ. ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದರು.
ಸದಸ್ಯರಾದ ಕೆ.ಸಿ.ಮಂಜುನಾಥ್, ಡಿ.ಪ್ರೇಮಕುಮಾರ್, ಬಸ್ ಸಂತೋಷ್‌ಕುಮಾರ್, ಕೆ.ಎಸ್.ಪ್ರಮೋದ್‌ಕುಮಾರ್, ಕೆ.ಬಿ.ಮಹೇಶ್, ಎಚ್.ಎನ್.ಪ್ರವೀಣ್ ಮಾತನಾಡಿ, ಪ್ರಸ್ತುತ ಮಂಡಿಸಿರುವ ಬಜೆಟ್ ಸಾಮಾಜಿಕ ಅಸಮಾನತೆಯಿಂದ ಕೂಡಿದೆ. ಪಟ್ಟಣದ ಪಾರ್ಕ್‌ಗಳು ಹಾಗೂ ವಿದ್ಯುತ್ ಶವಾಗಾರ ಹಾಗೂ ಸಾರ್ವಜನಿಕ ಸ್ಮಶಾನಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವು ಯಾವುದಕ್ಕೂ ಸಾಲುವುದಿಲ್ಲ. ಪಟ್ಟಣದಲ್ಲಿ ನಡೆಯುತ್ತಿರುವ ಕೋಟಿಗಟ್ಟಲೆ ಹಣದ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಕಳಪೆಯಿಂದ ಕೂಡಿವೆ. ಪುರಸಭೆಯ ಇಂಜಿನಿಯರ್ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಳಪೆ ಕೆಲಸ ನಡೆಸುತ್ತಾ ಸರ್ಕಾರದ ಕೋಟಿಗಟ್ಟಲೆ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಕೆ.ಆರ್.ಪೇಟೆ ಪುರಸಭೆಯ ಆಡಳಿತ ವ್ಯವಹಾರಗಳು ಒಂದೂ ಸರಿಯಿಲ್ಲ. ಖಾತೆ, ಇ-ಸ್ವತ್ತು ಸೇರಿದಂತೆ ಎಲ್ಲವೂ ಅಸ್ಪಷ್ಟತೆಯಿಂದ ಕೂಡಿದ್ದು, ಪುರಸಭೆಯಲ್ಲಿ ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿದೆ. ಹೊಸದಾಗಿ ಉಪವಿಭಾಗಾಧಿಕಾರಿಗಳಾಗಿ ಆಗಮಿಸಿರುವ ಪುರಸಭೆ ಆಡಳಿತಾಧಿಕಾರಿ ಮಾರುತಿ ಅವರು ಕೆ.ಆರ್.ಪೇಟೆ ಪುರಸಭೆಯ ಜಡ್ಡುಗಟ್ಟಿರುವ ಆಡಳಿತಕ್ಕೆ ಚುರುಕು ನೀಡಲು ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್ ಸ್ವಾಗತಿಸಿದರೆ ಸ್ಥಾಮಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್ ಬಜೆಟ್ ಮಂಡಿಸಿದರು. ಕಂದಾಯಾಧಿಕಾರಿ ರವಿಕುಮಾರ್ ವಂದಿಸಿದರು. ಪುರಸಭೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಮಹಾದೇವಿ ನಂಜುಂಡ, ನಟರಾಜ್, ಸದಸ್ಯರಾದ ಇಂದ್ರಾಣಿ ವಿಶ್ವನಾಥ್, ಪದ್ಮಮ್ಮ, ಶುಭಾ ಗಿರೀಶ್, ಖಮ್ಮರ್‌ತಾಜ್, ಕಲ್ಪನಾದೇವರಾಜು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.