

ಬೆಂಗಳೂರು: ಪೊಲೀಸರ ಬಂಧಿಯಾಗಿರುವ ವಂಚಕರಲ್ಲೇ ಮಹಾ ವಂಚಕ ಯುವರಾಜ್ ಅಲಿಯಾಸ್ ಸ್ವಾಮಿಯ ಮೋಸದ ಬೇರು ಅಗೆದಷ್ಟು ಹಾಳವಾಗುತ್ತಿದ್ದು, ಇದೀಗ ಮತ್ತೊಂದು ಸ್ಫೊಟಕ ವಿಚಾರ ಬೆಳಕಿಗೆ ಬಂದಿದೆ.
ವಂಚಕ ಯುವರಾಜ್ ಮೊಬೈಲ್ನಲ್ಲಿ 108 ಫೋಟೊಗಳು ಪತ್ತೆಯಾಗಿವೆ. ಕನ್ನಡದ ಟಾಪ್ ನಟಿಯರ ಫೋಟೋಗಳಿದ್ದು, ಇವುಗಳೇ ಯುವರಾಜ್ ಅಸ್ತ್ರವಾಗಿದ್ದವು ಎನ್ನಲಾಗಿದೆ.
ವಂಚಿಸಲು ತನ್ನ ಮಾತಲ್ಲಿ ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದ ಯುವರಾಜ್, ವಿಫಲವಾದಾಗ ಅಸ್ತ್ರವಾಗಿ ತನ್ನ ಕಾಂಟಾಕ್ಟ್ ಹಾಗೂ ಪೋಟೋಗಳನ್ನು ತೋರಿಸುತ್ತಿದ್ದ. ಅದಕ್ಕೂ ಬಗ್ಗದಿದ್ರೆ ಮೂರನೇ ಅಸ್ತ್ರವಾಗಿ ನಟಿ ಹಾಗೂ ಮಾಡೆಲ್ಗಳ ಫೋಟೋ ಪ್ರಯೋಗ ಮಾಡುತ್ತಿದ್ದ ಎನ್ನಲಾಗಿದೆ. ಸಿಸಿಬಿ ತನಿಖೆ ವೇಳೆ ಯುವರಾಜ್ ತಪ್ಪೋಪ್ಪಿಕೊಂಡಿರುವ ಮಾಹಿತಿ ಇದೆ.
ಇದಕ್ಕೆ ಪೂರಕವಾಗಿ ಅವನ ಮೊಬೈಲ್ ರಿಟ್ರೀವ್ ಸಾಕ್ಷಿ ಹೇಳಿದೆ. ಲೋಕೇಷನ್ಸ್, ಆಡಿಯೋ ಜತೆಗೆ ಈತನ ಸಂಪರ್ಕದಲ್ಲಿದ್ದ ಪೋಟೋಗಳು ಪತ್ತೆಯಾಗಿವೆ. ಬರೋಬ್ಬರಿ 108 ನಟಿಯರು, ಮಾಡೆಲ್ಗಳ ಪೋಟೋಗಳು ಪತ್ತೆಯಾಗಿವೆ. ಜತೆಗೆ ಇವನ ಅಕೌಂಟ್ನಿಂದ ಅವರ ಅಕೌಂಟ್ಗೆ ಹಣ ವರ್ಗಾವಣೆಯಾಗಿದೆ. ಇದೇ ವಿಚಾರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ.
ಫೋಟೋದಲ್ಲಿರುವವರಿಗೂ ಯುವರಾಜ್ನಿಗೂ ಏನು ಸಂಬಂಧ? ಯಾವ ಕಾರಣಕ್ಕೆ ಹಣ ನೀಡಿದ್ದ ಎಂಬ ವಿಚಾರ ರಹಸ್ಯವಾಗಿದೆ. 7 ಮಂದಿ ಜತೆ ಹೆಚ್ಚು ವ್ಯವಹಾರ ಇರುವುದು ಪತ್ತೆಯಾಗಿದೆ. ಸದ್ಯ ಆತನ ವಾಟ್ಸ್ ಚಾಟ್ ಮತ್ತು ಅಕೌಂಟ್ಗಳ ಹೋಲಿಕೆ ನಡೆಸಲಾಗ್ತಿದೆ. ಜತೆಗೆ ಅವರಿಂದ ಹಣ ರಿಕವರಿ ಮಾಡಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ ಎಂದು ಕೆಲ ಮೂಲಗಳಿಂದ ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್)