

ಹೊಳೆನರಸೀಪುರ: ಯೋಗದಿಂದ ದೈಹಿಕ ಆರೋಗ್ಯ, ಧ್ಯಾನದಿಂದ ನಮ್ಮ ಮಿದುಳಿನ ಆರೋಗ್ಯ ಸಕಾರಾತ್ಮಕ ಚಿಂತನೆಯಿಂದ ನಮ್ಮ ಮನಸ್ಸಿನ ಆರೋಗ್ಯ ಸದಾ ಕಾಲ ಉತ್ತಮವಾಗಿರುತ್ತದೆ ಎಂದು ಯೋಗ ಶಿಕ್ಷಕ ಗಣೇಶ್ ಬಾಬು ನುಡಿದರು.
ಹನುಮ ಜಯಂತಿ ಅಂಗವಾಗಿ ಪತಂಜಲಿ ಯೋಗಕೂಟದಿಂದ ಶುಕ್ರವಾರ 108 ಗುರು ನಮಸ್ಕಾರ ಮಾಡಿ ಹನುಮನಿಗೆ ವಂದಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿತ್ಯ ಯೋಗಾಸನ, ಪ್ರಾಣಾಯಾಮ, ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಿ. ನಿತ್ಯ ಯೋಗ ಮಾಡುವುದರಿಂದ ನಾವು ಸದಾಕಾಲ ಯುವಕರಂತೆ ಉತ್ಸಾಹದಿಂದ ಇರಬಹುದು. ನಮ್ಮಲ್ಲಿ 70 ವರ್ಷ ದಾಟಿದರೂ ಇಂದಿಗೂ ಯುವಕರಂತೆ ಯೋಗಾಸನ ಮಾಡುತ್ತಾ ಮಾದರಿ ಆಗಿದ್ದಾರೆ ಎಂದರು.
ವಾಸುದೇವ್ ಮೂರ್ತಿ ಮಾತನಾಡಿ, ನಮ್ಮ ಯೋಗಕೂಟದಲ್ಲಿ ಪ್ರತಿದಿನ ಬೆಳಗ್ಗೆ 5.30ರಿಂದ ಉಚಿತವಾಗಿ ಯೋಗಾಸನ ಕಲಿಸಲಾಗುತ್ತದೆ. ಯಾರೂ ಬೇಕಾದರೂ ನಮ್ಮಲ್ಲಿ ಬಂದು ಯೋಗಾಸನ ಕಲಿಯಬಹುದು. ನಮ್ಮಲ್ಲಿ ಯೋಗ ಕಲಿತು ಬೇರೆಡೆಗೆ ವರ್ಗಾ ವಣೆಯಾಗಿ ಕೆಲವರು ಯೋಗಶಾಲೆ ತೆರೆದು ಸಂಪಾದನೆ ಮಾಡುತ್ತಿದ್ದಾರೆ. ಜತೆಗೆ ಆರೋಗ್ಯವನ್ನೂ ಕಾಪಾಡಿಕೊಂಡಿದ್ದಾರೆ ಎಂದರು.
ಸನ್ಮಾನ: ಹಿರಿಯ ಯೋಗಪಟು ಕರುಣಾಕರ ಗುಪ್ತಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯೋಗಶಿಕ್ಷಕರಾದ ಗಣೇಶ್‌ಬಾಬು, ದಿನೇಶ್, ಲೋಕೇಶ್, ನರಸಿಂಹ, ಪ್ರೇಮಾ ಮಂಜುನಾಥ್, ಸೌಮ್ಯಾ, ಲಲಿತಾ ದಯಾನಂದ್, ಧನಲಕ್ಮೀ, ಪ್ರಭಾ, ಸುಜಾತಾ, ಪ್ರತಿಮಾ, ರಮೇಶ್, ದರ್ಶನ್, ಕೃಷ್ಣಮೂರ್ತಿ, ಸತ್ಯನಾರಾಯಣಶೆಟ್ಟಿ, ಗೃಹವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿ ಭಾಗವಹಿಸಿದ್ದರು.