108 ಸಿಬ್ಬಂದಿಯಿಂದ ಶ್ಲಾಘನೀಯ ಸೇವೆ

23-hvr-01
Published on

ಹಾವೇರಿ: ಜಿಲ್ಲೆಯಲ್ಲಿ ಒಟ್ಟು ಇಪ್ಪತ್ತು 108 ಆಂಬುಲೆನ್ಸ್​ಗಳಿದ್ದು, ಇದರಲ್ಲಿ ಒಂದನ್ನು ಕೋವಿಡ್-19ಗಾಗಿ ಮೀಸಲಿಡಲಾಗಿದೆ. ಮೀಸಲಿಟ್ಟ 108 ಆಂಬುಲೆನ್ಸ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವ 6 ಸಿಬ್ಬಂದಿಯು ಕಳೆದ ಒಂದು ತಿಂಗಳಿಂದ ಮನೆಗೆ ಹೋಗದೇ ಕರೊನಾ ಸೋಂಕು ಶಂಕಿತರನ್ನು ಆಸ್ಪತ್ರೆಗೆ ಕರೆತರುವ ಕಾರ್ಯದಲ್ಲಿ ತೊಡಗಿದ್ದಾರೆ. ಶಂಕಿತರು, ರೋಗ ಲಕ್ಷಣವಿರುವವರು, ಆಸ್ಪತ್ರೆಯಲ್ಲಿ ಕ್ವಾರಂಟೈನ್ ಇಡಬೇಕಾದವರನ್ನೆಲ್ಲ ಜಿಲ್ಲೆಯ ಮೂಲೆಮೂಲೆಯಿಂದ ಕರೆತರುವ ಕಾರ್ಯದಲ್ಲಿ ಕರೊನಾ ವಾರಿಯರ್ಸ್ ತೊಡಗಿಕೊಂಡಿದ್ದಾರೆ.

ಪ್ರತಿದಿನ 12 ತಾಸು ತಲಾ ಇಬ್ಬರಂತೆ ಸೇವೆ ಸಲ್ಲಿಸುತ್ತಿದ್ದಾರೆ. ವಾರದಲ್ಲಿ ಒಂದು ದಿನ ರಜೆ ಕೊಡಲಾಗುತ್ತಿದೆ. ಆ ರಜೆಗೂ ಮನೆಗೆ ಹೋಗದ ಸ್ಥಿತಿ ಇವರದ್ದಾಗಿದೆ. 6 ಸಿಬ್ಬಂದಿಯಲ್ಲಿ ಕುಮಾರ ಓಲೇಕಾರ, ರುಬಿನಾ ಗುಡಗೇರಿ, ವೀರಪ್ಪ ಭಜಂತ್ರಿ ನರ್ಸ್​ಗಳಾಗಿದ್ದರೆ, ತೌಫಿಕ್ ಪಠಾಣ, ರವಿ, ಮೌಲಾಲಿ ಚಾಲಕರಾಗಿದ್ದಾರೆ.

ದೂರದಿಂದಲೇ ನೋಡಿ ಬರ್ತಾರೆ: ಕರೊನಾ ಶಂಕಿತರನ್ನು ಆಸ್ಪತ್ರೆಗೆ ಕರೆತರಲು ನಿಯೋಜನೆಗೊಂಡಿರುವ ಈ ಸಿಬ್ಬಂದಿ ಈಗಾಗಲೇ 100ಕ್ಕೂ ಅಧಿಕ ಶಂಕಿತರನ್ನು ಕರೆತಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ಸೋಂಕು ಪತ್ತೆಯಾಗದಿದ್ದರೂ ಭೀತಿ ಮಾತ್ರ ದೂರವಾಗಿಲ್ಲ. ಹೀಗಾಗಿ ದೂರದಿಂದಲೇ ಕುಟುಂಬದವರನ್ನು ನೋಡಿ ಬರುವಂತಾಗಿದೆ.

ಶಂಕಿರತರನ್ನು ಕರೆತರುವುದು ಸವಾಲು: ಕರೊನಾ ಪಾಸಿಟಿವ್ ದೃಢಪಟ್ಟ ವಿಜಯಪುರದ ವ್ಯಕ್ತಿಯೊಬ್ಬ ಆಡೂರು ಗ್ರಾಮಕ್ಕೆ ಬಂದು ಹೋಗಿದ್ದ ಪ್ರಕರಣ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಈ ವಿಷಯ ಗೊತ್ತಾದ ತಕ್ಷಣ ಅಲ್ಲಿಗೆ ಹೋಗಿ ಸೋಂಕಿತರ ಸಂಪರ್ಕ ಹೊಂದಿದ್ದ 21ಜನರನ್ನು ಕರೆತಂದವರು ಇದೇ ಸಿಬ್ಬಂದಿ. ಸೋಂಕು ಲಕ್ಷಣಗಳಿರುವವರನ್ನು ಕರೆತರುವುದು ಸುಲಭದ ಕೆಲಸವಲ್ಲ. ಬಹುತೇಕರು ಆಸ್ಪತ್ರೆಗೆ ಬರುವಾಗ ಪ್ರತಿರೋಧ ಒಡ್ಡಿದರೂ ಅವರ ಮನವೊಲಿಸಿ ಕರೆತರುತ್ತಿದ್ದಾರೆ. ಶಂಕಿತರನ್ನು ಕರೆತಂದ ಬಳಿಕ ವಾಹನವನ್ನು ಶುಚಿಗೊಳಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮ ಅನುಸರಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇವರಿಗಿಲ್ಲ ಊಟದ ವ್ಯವಸ್ಥೆ: ಜಿಲ್ಲಾಸ್ಪತ್ರೆಯಲ್ಲಿ ಕ್ಯಾಂಟೀನ್ ಸೌಲಭ್ಯವಿದ್ದರೂ ಕರೊನಾ ಆಂಬುಲೆನ್ಸ್ ಸಿಬ್ಬಂದಿಗೆ ಜಿಲ್ಲಾಡಳಿತ ಊಟದ ವ್ಯವಸ್ಥೆ ಮಾಡದಿರುವುದು ಸಿಬ್ಬಂದಿಗೆ ಬೇಸರ ತರಿಸಿದೆ. ಕೆಲವರು ಸ್ಥಳೀಯರೇ ಆಗಿರುವುದರಿಂದ ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನಗರದಿಂದ ಹೊರಗಿನವರಾಗಿದ್ದು, ಊಟಕ್ಕೆ ಪರದಾಡುವ ಸ್ಥಿತಿಯಿದೆ. ಸ್ನೇಹಿತರು ತಂದು ಕೊಡುವ ಊಟವನ್ನೇ ಮಾಡಬೇಕಿದೆ.

ಬೇಕು ಇನ್ನಷ್ಟು ಸುರಕ್ಷತಾ ಸಾಮಗ್ರಿ: ವೈದ್ಯರಂತೆ 108 ಸಿಬ್ಬಂದಿಯೂ ಕರೊನಾ ಶಂಕಿತರೊಂದಿಗೆ ನೇರ ಸಂಪರ್ಕ ಹೊಂದುತ್ತಿದ್ದು, ಇವರಿಗೆ ಪಿಪಿಟಿ ಕಿಟ್, ಸ್ಯಾನಿಟೈಸರನ್ನು ಜಿಲ್ಲಾಡಳಿತ ನೀಡಿದೆ. ಆದರೆ, ಇವರಿಗೆ ಮುಖ್ಯವಾಗಿ ಎನ್-95ಮಾಸ್ಕ್​ನ ಅವಶ್ಯಕತೆಯೂ ಇದ್ದು ಈವರೆಗೂ ಜಿಲ್ಲಾಡಳಿತ ಪೂರೈಸದಿರುವುದು ಸಿಬ್ಬಂದಿಗೆ ಬೇಸರ ತರಿಸಿದೆ. ಸ್ಯಾನಿಟೈಸರ್ ಸಹ ಹೆಚ್ಚಾಗಿ ಬೇಕಿದ್ದು, ಅದನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಿಲ್ಲ ಎಂಬ ಗೋಳು 108 ಸಿಬ್ಬಂದಿಯದ್ದಾಗಿದೆ.

ಕಳೆದ ಒಂದು ತಿಂಗಳಿಂದ ಜಿಲ್ಲೆಯ ಒಂದಲ್ಲ ಒಂದು ಸ್ಥಳಕ್ಕೆ ಹೋಗಿ ಕರೊನಾ ಶಂಕಿತರನ್ನು ಕರೆತರುವ ಕಾರ್ಯವನ್ನು ಮಾಡುತ್ತಿದ್ದೇವೆ. ಸೋಂಕು ಯಾರಿಗೆಲ್ಲ ಬಂದಿರುತ್ತದೆ ಎಂದು ಮೊದಲೇ ಗೊತ್ತಿರುವುದಿಲ್ಲ. ಆದ್ದರಿಂದ ಆತಂಕದಲ್ಲೇ ಜವಾಬ್ದಾರಿಯಿಂದ ಇದೊಂದು ಅವಶ್ಯ ಕರ್ತವ್ಯವೆಂದು ನಿರ್ವಹಿಸುತ್ತಿದ್ದೇವೆ. ಕಳೆದೊಂದು ತಿಂಗಳಿನಿಂದ ನಮ್ಮ ಅನೇಕ ಸ್ನೇಹಿತರು ಮನೆಗೂ ಹೋಗಿಲ್ಲ.| ತೌಫಿಕ್ ಪಠಾಣ, 108 ಆಂಬುಲೆನ್ಸ್ ಪೈಲಟ್ಕರೊನಾ ಶಂಕಿತರನ್ನು ಕರೆತರುವಲ್ಲಿ 108 ಸಿಬ್ಬಂದಿ ಕಾರ್ಯ ಮಹತ್ವದ್ದಾಗಿದೆ. ಅವರಿಗೆ ಅವಶ್ಯವಿರುವ ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್​ಗ್ಲೌಸ್​ಗಳನ್ನು ಪೂರೈಸಿದ್ದೇವೆ. ಎನ್-95 ಮಾಸ್ಕ್ ನೀಡಿಲ್ಲ. ಅದನ್ನು ಕೂಡಲೆ ಅವರಿಗೆ ಪೂರೈಸುವ ವ್ಯವಸ್ಥೆ ಮಾಡುತ್ತೇನೆ. ಅವರು ಸುರಕ್ಷತೆಗೆ ಕೇಳುವ ಎಲ್ಲ ವಸ್ತುಗಳನ್ನು ಪೂರೈಸುತ್ತೇವೆ.| ಡಾ. ರಾಜೇಂದ್ರ ದೊಡ್ಡಮನಿ, ಡಿಎಚ್​ಒ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net