ಆರೋಗ್ಯ ಇಲಾಖೆಯಿಂದಲೇ 108 ಆಂಬುಲೆನ್ಸ್ ನಿರ್ವಹಣೆ

Ambulance
Published on

ಬೆಂಗಳೂರು: ರಾಜ್ಯದಲ್ಲಿ 108 ಆರೋಗ್ಯ ಕವಚ ಯೋಜನೆಯಡಿ ಆರೋಗ್ಯ ಇಲಾಖೆ ವತಿಯಿಂದಲೇ ಆಂಬುಲೆನ್ಸ್‌ಗಳ ನಿರ್ವಹಣೆ ಮಾಡಲಿದ್ದು, ಇದಕ್ಕಾಗಿ ಕಮಾಂಡ್ ಕಂಟ್ರೋಲ್ ಕೇಂದ್ರಕ್ಕೆ ಅಗತ್ಯವಿರುವ ಉಪಕರಣಗಳ ಖರೀದಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಈ ಕುರಿತು ಇಲಾಖೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿನ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲು 108 ಆರೋಗ್ಯ ಕವಚ ಯೋಜನೆಯಡಿ ಜಿವಿಕೆಇಎಂಆರ್‌ಐ ಸಂಸ್ಥೆ ಜತೆಗಿನ ಒಡಂಬಡಿಕೆ ಹಿಂಪಡೆಯಲಾಗಿದೆ ಎಂದು ತಿಳಿಸಿದೆ.

ಇಲಾಖೆ ವತಿಯಿಂದಲೇ ಆಂಬುಲೆನ್ಸ್ ನಿರ್ವಹಿಸಲು 112 ಎನ್‌ಜಿ ಇಆರ್‌ಎಸ್ ತಂತ್ರಾಂಶವನ್ನು ಬಳಸಿಕೊಳ್ಳಲಾಗುತ್ತದೆ. ಕಮಾಂಡ್ ಕಂಟ್ರೋಲ್ ಸೆಂಟರ್ ಅನ್ನು ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮೂಲಕ ಆಂಬುಲೆನ್ಸ್‌ಗಳ ನಿರ್ವಹಣೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದೆ.

108 ಆರೋಗ್ಯ ಕವಚ ಹಾಗೂ 104 ಆರೋಗ್ಯ ಸಹಾಯವಾಣಿಯ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಸರ್ಕಾರದ ಅಧೀನಕ್ಕೆ ಪಡೆದು ನಿರ್ವಹಿಸುವ ಉದ್ದೇಶದಿಂದ, ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ. 6.09 ಕೋಟಿ ರೂ. ಅಗತ್ಯ ಉಪಕರಣಗಳ ಖರೀದಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ ಕಾಯ್ದೆಯಡಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net