101 ಕೇಂದ್ರಗಳಲ್ಲಿ ಲಸಿಕೆ ಸಂಗ್ರಹ

8KWR1
Published on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 101 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಹೇಳಿದರು.

ಸರ್ಕಾರಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ಶುಕ್ರವಾರ ಕೋವಿಡ್ ಲಸಿಕೆ ಹಂಚಿಕೆಯ ತಾಲೀಮು (ಡ್ರೈರನ್) ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದಾಗಿ ಸರ್ಕಾರ ಹೇಳಿದೆ. ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಸೇರಿ 12 ಸಾವಿರ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಎರಡನೇ ಹಂತದಲ್ಲಿ ಪೊಲೀಸ್, ಪೌರ ಕಾರ್ವಿುಕರಂತಹ ಕೆಲಸಗಾರರಿಗೆ, ಮೂರನೇ ಹಂತದಲ್ಲಿ ವೃದ್ಧರು, ಗಂಭೀರ ಕಾಯಿಲೆಗೆ ಒಳಗಾದವರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಎಲ್ಲ ಫಲಾನುಭವಿಗಳ ಪಟ್ಟಿ ಮಾಡಲಾಗಿದೆ. ಲಸಿಕೆ ಪಡೆಯುವುದು ಕಡ್ಡಾಯವಲ್ಲ. ಲಸಿಕೆ ಪಡೆಯುವ ಪ್ರತಿಯೊಬ್ಬರ ಹೆಸರೂ ಆನ್​ಲೈನ್​ನಲ್ಲಿ ದಾಖಲಾಗಲಿದೆ. ಅವರವರ ಮೊಬೈಲ್​ಗೆ ಒಟಿಪಿ ಬರಲಿದೆ. ಒಬ್ಬರಿಗೆ ಎರಡು ಹನಿ ಲಸಿಕೆ ನೀಡಬೇಕು ಎಂಬ ಮಾಹಿತಿ ಮಾತ್ರ ಸದ್ಯಕ್ಕಿದೆ ಎಂದರು.

ಡಿಎಚ್​ಒ ಡಾ. ಶರದ್ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ರಕ್ಷಣಾಧಿಕಾರಿ ಡಾ.ರಮೇಶರಾವ್ ಇದ್ದರು. ಕಾರವಾರದ ಬೈತಖೋಲ ನಗರ ಆರೋಗ್ಯ ಕೇಂದ್ರ ಹಾಗೂ ಕ್ರಿಮ್್ಸ ಆಸ್ಪತ್ರೆಯಲ್ಲಿ ತಲಾ 25 ಆರೋಗ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿ ಲಸಿಕೆ ಹಾಕುವ ಕಲ್ಪಿತ ಕಾರ್ಯಾಚರಣೆ ನಡೆಸಲಾಯಿತು.

ದಾಂಡೇಲಿ ವರದಿ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಲ್ಪಿತ ಕಾರ್ಯಾಚರಣೆ ನಡೆಸಲಾಯಿತು. ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ ಮಾತನಾಡಿ, ಲಸಿಕೆ ಪಡೆಯ ಬಯಸುವ ಫಲಾನುಭವಿಗಳು ಕೋ- ವಿನ್ ಆಪ್ ಡೌನ್​ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆ ದಾಖಲಿಸಿ ದೃಢೀಕರಿಸಿಕೊಳ್ಳಬೇಕು ಎಂದರು. ತಹಸೀಲ್ದಾರ್ ಶೈಲೇಶ ಪರಮಾನಂದ, ವೈದ್ಯಾಧಿಕಾರಿ ಡಾ. ರಾಜೇಶ ಪ್ರಸಾದ, ಡಾ. ಅನ್ನಪೂರ್ಣ ವಸ್ತ್ರದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net