101 ಜನರಿಂದ ರಕ್ತದಾನ

SRP_28-03jpj
Published on

ಶ್ರೀರಂಗಪಟ್ಟಣ: ವೀರ ಸ್ವಾತಂತ್ರೃ ಹೋರಾಟಗಾರ, ದೇಶಪ್ರೇಮಿ ಭಗತ್ ಸಿಂಗ್ ಅವರ 117ನೇ ಜನ್ಮದಿನದ ಪ್ರಯುಕ್ತ 101 ಜನರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು.


ಪಟ್ಟಣದ ಪೇಟೆ ನಾರಾಯಣಸ್ವಾಮಿ ದೇವಾಲಯ ಆವರಣದಲ್ಲಿ ಶನಿವಾರ ಜೀವಧಾರೆ ಮಂಡ್ಯ ಸಹಯೋಗದೊಂದಿಗೆ ಕಲ್ಪವೃಕ್ಷ ಹಸಿರು ಬಳಗ, ಹಿಂದು ಜಾಗರಣ ವೇದಿಕೆ, ಯುವ ಬ್ರಿಗೇಡ್, ಲಕ್ಷ್ಮೀದೇವಿ ಯುವಕರ ಬಳಗ ವತಿಯಿಂದ ದೇಹಕ್ಕೆ ಅಳಿವುಂಟು ನನ್ನ ಚಿಂತನೆಗಳಿಗಲ್ಲ ಎಂಬ ಘೋಷವಾಕ್ಯಗಳೊಂದಿಗೆ ಬೆಳಗ್ಗೆಯಿಂದ ಸಂಜೆಯವರೆಗೂ ಆಯೋಜಿಸಿದ್ದ ಈ ಬೃಹತ್ ರಕ್ತದಾನ ಶಿಬಿರದಲ್ಲಿ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್ ಸೇರಿದಂತೆ ಹಲವು ದಾನಿಗಳು ಆಗಮಿಸಿ ತಮ್ಮ ಅಮೂಲ್ಯ ರಕ್ತವನ್ನು ದಾನ ಮಾಡುವ ಮೂಲಕ ಸಾಮಾಜಿಕ ಕಾಳಜಿಯೊಂದಿಗೆ ಗಮನ ಸೆಳೆದರು.


ಮಂಡ್ಯದ ಮಿಮ್ಸ್‌ನ ರಕ್ತನಿಧಿ ಕೇಂದ್ರದ ತಜ್ಞ ರಫೀಕ್ ಅವರ ನೇತೃತ್ವದಲ್ಲಿ ವೈದ್ಯಕೀಯ ಸಿಬ್ಬಂದಿ ದಾನಿಗಳಿಂದ ಸಾಕಷ್ಟು ಜಾಗೃತೆಯಿಂದ ರಕ್ತವನ್ನು ಪಡೆದು ಸುರಕ್ಷತೆಯ ಸ್ಥಳದಲ್ಲಿ ಸಂರಕ್ಷಿಸಿದರು.


ಜೀವಧಾರೆ ಮಂಡ್ಯದ ಮುಖ್ಯಸ್ಥ ನಟರಾಜು, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಹ ಸಂಚಾಲಕ ಚಂದನ್, ತಾಲೂಕು ಸಂಚಾಲಕ ಎಸ್.ಹರ್ಷ, ನಗರ ಅಧ್ಯಕ್ಷ ಶಿವು, ಯುವ ಮುಖಂಡ ಪ್ರೇಮ್, ಶರತ್, ಯುವ ಬ್ರಿಗೇಡ್ ಮುಖ್ಯಸ್ಥ ರಂಜಿತ್, ಕಿರಣ್ ಹಾಗೂ 108 ಆಂಬ್ಯುಲೆನ್ಸ್ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net