

ಹಾವೇರಿ: ಲಾಕ್ಡೌನ್ ಘೊಷಣೆಗೂ ಮುನ್ನ ವಿವಿಧ ಕಾರ್ಯಗಳಿಗೆ ಜಿಲ್ಲೆಗೆ ಬಂದು ಸಿಲುಕಿಕೊಂಡಿದ್ದ 100ಕ್ಕೂ ಹೆಚ್ಚು ಜನರನ್ನು ಜಿಲ್ಲಾಡಳಿತ, ಶನಿವಾರ ಸಂಜೆ ಸಾಮಾಜಿಕ ಅಂತರ ನಿಯಮ ಪಾಲನೆಯೊಂದಿಗೆ ಕಳುಹಿಸಿಕೊಟ್ಟಿದೆ.
ಮೊದಲ ಹಂತವಾಗಿ ಅವರು ಯಾವ ಸ್ಥಳಕ್ಕೆ ಹೋಗುತ್ತಾರೆ, ಏಕೆ ಹೋಗುತ್ತಿದ್ದಾರೆ, ಅಲ್ಲಿ ಅವರ ಉದ್ಯೋಗವೇನು, ಅವರ ವಾಸ್ತವ್ಯದ ವಿಳಾಸ ಹೀಗೆ ಪ್ರಥಮ ಮಾಹಿತಿ ಸಂಗ್ರಹಿಸಿದ್ದ ಅಧಿಕಾರಿಗಳು, ಅವರೆಲ್ಲರ ಆರೋಗ್ಯ ತಪಾಸಣೆ ಮಾಡಿ, ಬಸ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಅಂದರೆ ಒಂದು ಬಸ್ನಲ್ಲಿ 21 ಜನರಿಗೆ ಆಸನ ವ್ಯವಸ್ಥೆ ಮಾಡಿ ಕಳುಹಿಸಿದರು. ಆಯಾ ತಾಲೂಕುಗಳಲ್ಲಿ ತಹಸೀಲ್ದಾರರು ನೇತೃತ್ವ ವಹಿಸಿ ವಲಸೆ ಕಾರ್ವಿುಕರನ್ನು ಹೊರ ಜಿಲ್ಲೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ಜಿಲ್ಲೆಯಲ್ಲಿ 289 ವಲಸೆ ಕಾರ್ವಿುಕರನ್ನು ಗುರುತಿಸಲಾಗಿತ್ತು. ಇವರಲ್ಲಿ 100ಕ್ಕೂ ಹೆಚ್ಚು ಜನರು ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಮೈಸೂರಿಗೆ ಹೋಗುವವರಿದ್ದರು. ಆ ಜಿಲ್ಲೆಗಳಲ್ಲಿ ಕರೊನಾ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಬಹುತೇಕರು ಸದ್ಯ ಅಲ್ಲಿಗೆ ಹೋಗಲು ನಿರಾಕರಿಸಿದರು. ಉತ್ತರ ಕನ್ನಡ, ಧಾರವಾಡ, ಕೊಪ್ಪಳ ಜಿಲ್ಲೆಗಳಿಗೆ ಹೋಗುವವರು ಆಸಕ್ತಿ ತೋರುತ್ತಿದ್ದು, ಅವರನ್ನು ಕಳುಹಿಸಲು ಜಿಲ್ಲಾಡಳಿತ ಮುಂದಾಗಿದೆ.
50 ಜನ ಜಿಲ್ಲೆಗೆ: ಅದೇ ರೀತಿ ಹೊರ ಜಿಲ್ಲೆಗಳಿಂದ ಶನಿವಾರ ಒಟ್ಟು 50 ಜನರು ಜಿಲ್ಲೆಗೆ ಬಂದಿದ್ದಾರೆ. ಆಯಾ ತಾಲೂಕಿನ ಫೀವರ್ ಕ್ಲಿನಿಕ್ನಲ್ಲಿ ತಪಾಸಣೆ ಮಾಡಿ, ರಕ್ತ ಮತ್ತು ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬರುವವರೆಗೆ ಒಂದೆರಡು ದಿನ ಅವರನ್ನೆಲ್ಲ ಆಯಾ ತಾಲೂಕಿನಲ್ಲಿಯೇ ಸರ್ಕಾರಿ ಕ್ವಾರಂಟೈನ್ನಲ್ಲಿಡಲಾಗಿದೆ.
ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಬೇಡ: ಹೊರ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ ಜಿಲ್ಲೆಯ ಕಾರ್ವಿುಕರಲ್ಲಿ 50 ಕಾರ್ವಿುಕರು ಸಾರಿಗೆ ಸಂಸ್ಥೆ ಬಸ್ ಮೂಲಕ ಶನಿವಾರ ಹಾವೇರಿಗೆ ಬಂದಿಳಿದಿದ್ದಾರೆ. ಕೊಡಗು, ಸುಳ್ಯ, ಪುತ್ತೂರು ಹಾಗೂ ಮಂಗಳೂರಿನಿಂದ ನಾಲ್ಕು ಬಸ್ಗಳಲ್ಲಿ ಕಾರ್ವಿುಕರು ಬಂದಿದ್ದಾರೆ. ಸರ್ಕಾರ ಸ್ವಂತ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಆಯಾ ಊರುಗಳಿಂದ ಬಸ್ನಲ್ಲಿ ಪ್ರಯಾಣಿಸಿ ಶನಿವಾರ ಜಿಲ್ಲೆಗೆ ಬಂದಿದ್ದರು. ನಗರದ ಗುರುಭವನದ ಬಳಿ ಬಸ್ನಿಂದ ಕಾರ್ವಿುಕರು ಇಳಿಸುತ್ತಿರುವುದನ್ನು ನೋಡಿದ ಸ್ಥಳೀಯರು ಆತಂಕಕ್ಕೊಳಗಾಗಿ ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ಆರೋಗ್ಯ ಚಿಕಿತ್ಸೆ ನಡೆಸದೇ ನೇರವಾಗಿ ಜನವಸತಿ ಪ್ರದೇಶದಲ್ಲಿರುವ ಗುರುಭವನದಲ್ಲಿ ಕ್ವಾರಂಟೈನ್ ಮಾಡದಂತೆ ಒತ್ತಾಯಿಸಿದರು. ಬಳಿಕ ಕೆಲವರನ್ನು ಆರ್ಟಿಒ ಕಚೇರಿ ಸಮೀಪದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಹಾಗೂ ಇನ್ನು ಕೆಲವರನ್ನು ತಾಲೂಕಿನ ಕರ್ಜಗಿ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಶಂಕರ ಜಿ.ಎಸ್. ತಿಳಿಸಿದ್ದಾರೆ.