100 ದಿನದ ಅಭಿವೃದ್ಧಿ ಶೂನ್ಯ

sunil hegde
Published on

ಹಳಿಯಾಳ ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದ ಅನೇಕ ರೈತ ಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಕಾಂಗ್ರೆಸ್ ಸರ್ಕಾರದ 100 ದಿನದ ಆಡಳಿತದಲ್ಲಿ 109 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದೇ ದೊಡ್ಡ ಸಾಧನೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಸುನೀಲ ಹೆಗಡೆ ಟೀಕಿಸಿದರು.
ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸುಳ್ಳು ಹೇಳುತ್ತಲೇ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಈಗ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಕಾಲಹರಣ ಮಾಡುತ್ತಿದೆ. 100 ದಿನಗಳಲ್ಲಿ ಆ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ರಾಜ್ಯದಲ್ಲಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಪರಿಹಾರದ ದುಡ್ಡಿನ ಆಸೆಗಾಗಿ ಎಂದು ಸಚಿವ ಶಿವಾನಂದ ಪಾಟೀಲ ಹೇಳಿಕೆ ನೀಡಿರುವುದು, ಇದು ಕಾಂಗ್ರೆಸ್ ಮುಖಂಡರ ಹೀನ ಮನಸ್ಥಿತಿ ತೋರಿಸುತ್ತದೆ ಎಂದರು.
ನೂರು ದಿನ ಪೂರೈಸಿರುವ ಜಾಹೀರಾತಿಗೆ ಬೇಕಾಬಿಟ್ಟಿ ಕೊಟ್ಯಂತರ ರೂ. ಖರ್ಚು ಮಾಡುವ ಬದಲು ಸರ್ಕಾರಿ ಇಲಾಖೆಯ ಹಲವಾರು ನೌಕರರಿಗೆ ಸಂಬಳ ಕೊಡಬಹುದಿತ್ತು. ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತಿಗಾಗಿ ಜನಸಾಮಾನ್ಯರ ತೆರಿಗೆ ಹಣ ಪೋಲು ಮಾಡುತ್ತಿರುವುದು ಸರಿಯೇ ಎಂದು ಹೆಗಡೆ ಪ್ರಶ್ನಿಸಿದರು.
ಶಾಸಕ ಆರ್.ವಿ. ದೇಶಪಾಂಡೆ ಅವರು, ರೈತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಇವರದೇ ಸರ್ಕಾರ ಇವರ ಮಾತಿಗೆ ಗೌರವ ಕೊಡುತ್ತಿಲ್ಲ. ಕೇವಲ ಬರಗಾಲಪೀಡಿತ ತಾಲೂಕೆಂದು ಘೊಷಿಸಲು ಆಗದೇ ಒದ್ದಾಡುವಂತಾಗಿದೆ. ನಮ್ಮ ಕ್ಷೇತ್ರದ ಎಲ್ಲ ತಾಲೂಕಿನಲ್ಲಿ ಕಬ್ಬು, ಭತ್ತ ಮತ್ತು ಮೆಕ್ಕೆಜೋಳ ಬೆಳೆ ಹಾನಿಗೀಡಾಗಿದೆ. ಕೂಡಲೇ ಬರಗಾಲಪೀಡಿತ ತಾಲೂಕೆಂದು ಘೊಷಿಸಿ ವಿಶೇಷ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಬಿಜೆಪಿ ಪ್ರಮುಖರಾದ ಗಣಪತಿ ಕರಂಜೇಕರ್, ಅನಿಲ ಮುತ್ನಾಳ್, ಶಿವಾಜಿ ನರಸಾನಿ, ಚಂದ್ರಕಾಂತ ಕಮ್ಮಾರ, ವಿ.ಎಂ. ಪಾಟೀಲ, ಯಲ್ಲಪ್ಪ ಹೊನ್ನೋಜಿ, ವಾಸು ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net