ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗಳಿಗೆ ಶಿಕ್ಷೆ

Court 20 dec 19
Published on

ಹಾವೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಫಕ್ಕೀರೇಶ ಕಾಮನಹಳ್ಳಿ ಎಂಬಾತನಿಗೆ 10 ವರ್ಷಗಳ ಸಜೆ ಹಾಗೂ 2ನೇ ಅಪರಾಧಿ ಬಸವರಾಜ ಸಣ್ಣಪ್ಪನವರ ಎಂಬಾತನಿಗೆ 7 ವರ್ಷಗಳ ಶಿಕ್ಷೆ ಹಾಗೂ ದಂಡ ವಿಧಿಸಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ(ಪೋಕ್ಸೋ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಾಲಕಿಯನ್ನು ನಿತ್ಯ ವಾಹನದಲ್ಲಿ ಶಾಲೆಗೆ ಬಿಡುವುದು, ಕರೆತರುವುದನ್ನು ಮಾಡಿ ಪರಿಚಯಿಸಿಕೊಂಡಿದ್ದರು ಫಕ್ಕೀರೇಶ ಈರಪ್ಪ ಕಾಮನಹಳ್ಳಿ (ವಾಲಿಕಾರ) ಹಾಗೂ ಬಸವರಾಜ ರಾಮಪ್ಪ ಸಣ್ಣಪ್ಪನವರ. ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಅಪರಾಧಿಗಳು ನೀರು ಕೇಳುವ ನೆಪದಲ್ಲಿ ಹೋಗಿ ಲೈಂಗಿಕ ದೌರ್ಜನ್ಯವೆಸಗಿದ ಕುರಿತು ದೂರು ದಾಖಲಾಗಿತ್ತು. ಶಿಗ್ಗಾಂವಿ ವೃತ್ತ ನಿರೀಕ್ಷಕರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶರು ಅಪರಾಧ ರುಜುವಾತದ ಕಾರಣ ಪ್ರಕರಣದ 1ನೇ ಅಪರಾಧಿ ಫಕ್ಕೀರೇಶ ಈರಪ್ಪ ಕಾಮನಹಳ್ಳಿ (ವಾಲಿಕಾರ) ಎಂಬುವವರಿಗೆ 10 ವರ್ಷಗಳ ಸಜೆ ಮತ್ತು 10 ಸಾವಿರ ರೂ. ದಂಡ ಹಾಗೂ 2ನೇ ಅಪರಾಧಿಗೆ 7 ವರ್ಷ ಸಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತೆಗೆ ಪರಿಹಾರವಾಗಿ 15 ಸಾವಿರ ರೂ. ನೀಡಲು ಆದೇಶಿಸಲಾಗಿದೆ. ಸರ್ಕಾರದ ಪರ (ಪೋಕ್ಸೋ) ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ವಿನಾಯಕ ಪಾಟೀಲ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net