

ಕೆ.ಆರ್.ನಗರ: ಜನರು ನನಗೆ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಬಸವೇಶ್ವರ ದೇವಾಲಯ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ದೇವಸ್ಥಾನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ರೂ. ಬಿಡುಗಡೆ ಮಾಡಿದ್ದು ಮತ್ತೆ 10 ಲಕ್ಷ ರೂ. ನೀಡುತ್ತೇನೆ. ಮುಂದಿನ ನಾಲ್ಕು ತಿಂಗಳೊಳಗೆ ಕೆಲಸ ಪೂರ್ಣಗೊಳಿಸಿ ಜನವರಿ ತಿಂಗಳಲ್ಲಿ ಉದ್ಘಾಟಿಸಲಾಗುವುದು. ಗ್ರಾಮದ ಅಭಿವೃದ್ಧಿ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಎಲ್ಲ ಸಮುದಾಯದವರು ಸಹಕಾರ ನೀಡಬೇಕು ಎಂದರು.
ಸಿದ್ದಪ್ಪಾಜಿ ದೇವಾಲಯಕ್ಕೂ 5 ಲಕ್ಷ ರೂ. ಅನುದಾನ ನೀಡಲಾಗಿದೆ. ಪರಿಶಿಷ್ಟ ಸಮುದಾಯದ ಕಾಲನಿಯಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ 40 ಲಕ್ಷ ರೂ. ಅನುದಾನ ಮಂಜೂರಾಗಿದ್ದು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸಿದ್ದಾಪುರ ಗ್ರಾಮದಿಂದ ಹೊಸಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಪಿಎಂಜಿಎಸ್‌ವೈ ಯೋಜನೆಯಡಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಿದ್ದಾಪುರ ಗ್ರಾಪಂ ಅಧ್ಯಕ್ಷ ರಂಗೇಶ್‌ಕುಮಾರ್, ಪಿಡಿಒ ಗಿರೀಶ್, ಮಾಜಿ ಅಧ್ಯಕ್ಷ ತ್ಯಾಗರಾಜು, ಸದಸ್ಯರಾದ ಸರ್ವಮಂಗಳಾ, ಮಾದೇಗೌಡ, ಸುಕನ್ಯಾ ಕುಮಾರ್, ಮಹದೇವ, ಮಾಜಿ ಸದಸ್ಯ ಸುರೇಶ್, ಭೂನ್ಯಾಯ ಮಂಡಳಿ ಮಾಜಿ ಸದಸ್ಯ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ತಾಲೂಕು ಸೇವದಾಳದ ಅಧ್ಯಕ್ಷ ಬಿ.ಎಚ್.ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ಹರಿಚಿದಂಬರ, ಮುಖಂಡರಾದ ಲಕ್ಷ್ಮೀನಾರಾಯಣ, ರಾಜು, ತ್ಯಾಗರಾಜ್, ರಘು, ಎಸ್.ಟಿ.ಮಧು, ದೊಡ್ಡೇಗೌಡ, ಸತೀಶ್, ದೊರೆ ಇತರರಿದ್ದರು.